100 ಬಾರಿ ಇರಿದ ರೀತಿಯಲ್ಲಿ 2 ದಿನದ ಹೆಣ್ಣು ಮಗುವಿನ ಶವ ಪತ್ತೆ

– ಎದೆ, ಬೆನ್ನಿನ ಭಾಗದಲ್ಲಿ ಗಾಯದ ಗುರುತುಗಳು
– ಸ್ಕ್ರೂಡ್ರೈವರ್‌ನಲ್ಲಿ ಚುಚ್ಚಿ ಕೊಂದ್ರಾ ಪಾಪಿಗಳು?

ಭೋಪಾಲ್: ಎರಡು ದಿನದ ಹಸುಗೂಸಿನ ಮೃತದೇಹವೊಂದು ಭೋಪಾಲ್ ನ ಅಯೋಧ್ಯಾ ನಗರದಲ್ಲಿ ಪತ್ತೆಯಾಗಿದೆ. ಮಗುವಿನ ದೇಹದ ತುಂಬಾ ಗಾಯದ ಗುರುತುಗಳಿದ್ದು, ಸ್ಥಳೀಯ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಮಗು ಮನೆಯಲ್ಲೇ ಹುಟ್ಟಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಸೋಮವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ಅಯೋಧ್ಯಾ ನಗರದ ಜಿ ಸೆಕ್ಟರ್ ನ ಸೈಂಟ್ ಥೋಮಸ್ ಶಾಲೆಯ ಮುಂಭಾಗದಲ್ಲಿರುವ ದೇವಸ್ಥಾನವೊಂದರ ಪಕ್ಕದಲ್ಲಿ ಹಸುಗೂಸು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು.

ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಲಿನಿಂದ ಸುತ್ತಿದ್ದ ಮಗುವಿನ ಮೃತದೇಹವನ್ನು ತೆರೆದು ನೋಡಿದಾಗ ಅದರ ಎದೆ ಹಾಗೂ ಬೆನ್ನಿನ ಭಾಗದಲ್ಲಿ ಸುಮಾರು 100 ಬಾರಿ ಇರಿತವಾಗಿರುವ ಗುರುತುಗಳು ಇರುವುದನ್ನು ಪೊಲೀಸರು ಗಮನಿಸಿದರು. ಹೀಗಾಗಿ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಮಗುವನ್ನು ರಾತ್ರಿ ದೇವಾಲಯದಲ್ಲಿ ಪಕ್ಕದಲ್ಲಿ ಬಿಟ್ಟು ಹೋಗಿರಬೇಕು. ಹೀಗಾಗಿ ಪ್ರಾಣಿಗಳು ಕಚ್ಚಿ ಗಾಯಗೊಳಿಸಿರಬಹುದು ಎಂದು ಪೊಲೀಸರು ಆರಂಭದಲ್ಲಿ ಶಂಕಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಸಣ್ಣದಾದ ಸ್ಕ್ರೂಡ್ರೈವರ್ ನಂತಹ ಗಟ್ಟಿಯಾದ ಹಾಗೂ ಮೊಂಡಾಗಿರುವ ವಸ್ತುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ ಎಂಬುದಾಗಿ ವರದಿ ಬಂದಿದೆ.

ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಪೊಲೀಸರು ಅಪರಿಚಿತ ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನವಜಾತ ಶಿಶುವನ್ನು ಯಾರು ಬಿಟ್ಟು ಹೋಗಿದ್ದು ಎಂದು ಪತ್ತೆ ಹಚ್ಚಲು ಸ್ಥಳೀಯ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *