100 ಕೋಟಿ ಹಫ್ತಾ ಕೇಸ್ – ಮಹಾ ಸರ್ಕಾರದ ಮೊದಲ ವಿಕೆಟ್ ಪತನ

– ಪರಮ್‍ಬೀರ್ ಲೆಟರ್ ಬಾಂಬ್‍ಗೆ ದೇಶ್‍ಮುಖ್ ರಾಜೀನಾಮೆ
– ಸಿಬಿಐ ತನಿಖೆಗೆ ಆದೇಶಿಸಿದ್ದ ಬಾಂಬ್ ಹೈಕೋರ್ಟ್

ಮುಂಬೈ: ಮಹಾ ವಿಕಾಸ್ ಆಘಾಡಿ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ. ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಅನಿಲ್ ದೇಶ್‍ಮುಖ್ ರಾಜೀನಾಮೆ ನೀಡಿದ್ದಾರೆ.

ನೈತಿಕ ಹೊಣೆ ಹೊತ್ತು ನಾನು ರಾಜೀನಾಮೆ ನೀಡುವುದಾಗಿ ಅನಿಲ್ ದೇಶ್‍ಮುಖ್ ಹೇಳಿದ್ದಾರೆ. ವಿಶೇಷ ಏನೆಂದರೆ ಸೋಮವಾರ ಬಾಂಬೆ ಹೈಕೋರ್ಟ್ ದ್ವಿಸದಸ್ಯ ಪೀಠ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶಿಸಿತ್ತು. 15 ದಿನಗಳ ಒಳಗಡೆ ಪ್ರಾಥಮಿಕ ತನಿಖೆ ನಡೆಸಬೇಕೆಂದು ಹೈಕೋರ್ಟ್ ಸೂಚಿಸಿತ್ತು. ಸಿಬಿಐ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಅನಿಲ್ ದೇಶ್‍ಮುಖ್ ಮಧ್ಯಾಹ್ನವೇ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಆರೋಪ ಏನು?
ಮಹಾರಾಷ್ಟ್ರದ ಗೃಹ ಸಚಿವರಾದ ಅನಿಲ್ ದೇಶ್‍ಮುಖ್ ಪ್ರತಿ ತಿಂಗಳು 100 ಕೋಟಿ ರು. ಹಫ್ತಾ ಕೇಳುತ್ತಾರೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ದೂರು ನೀಡಿದ್ದರು. ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬ್ ಇಟ್ಟ ಸಚಿನ್ ವಾಜೆ ಅವರನ್ನು ಬಳಸಿಕೊಂಡು ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಫೆಬ್ರವರಿ ಮಧ್ಯಭಾಗದಲ್ಲಿ ಅಂದರೆ ಫೆಬ್ರವರಿ 6ರಿಂದ 16ರ ಮಧ್ಯೆ ಅನಿಲ್ ದೇಶ್‍ಮುಖ್ ಅವರು ಕೆಲವು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಪರಮ್ ಬಿರ್ ಸಿಂಗ್ ಪತ್ರದಲ್ಲಿ ದೂರಿದ್ದರು.

ಈ ಪತ್ರ ಬೆಳಕಿಗೆ ಬಂದ ಬೆನ್ನಲ್ಲೇ ಬಿಜೆಪಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಭಾರೀ ಟೀಕೆ ಮಾಡತೊಡಗಿತು. ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್ ದಾಖಲೆಗಳ ಮೇಲೆ ದಾಖಲೆಗಳನ್ನು ಬಿಡುಗಡೆ ಮಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ದೇಶ್‍ಮುಖ್ ರಾಜೀನಾಮೆಗೆ ಆಗ್ರಹಿಸಿದ್ದರು.

ಎನ್‍ಸಿಪಿ ನಾಯಕ ಶರಾದ್ ಪವಾರ್ ಪ್ರತಿಕ್ರಿಯಿಸಿ, ಫೆಬ್ರವರಿ ಮಧ್ಯಭಾಗದಲ್ಲಿ ಅಂದರೆ ಫೆಬ್ರವರಿ 6ರಿಂದ 16ರ ಮಧ್ಯೆ ಅನಿಲ್ ದೇಶ್‍ಮುಖ್ ಅವರು ಕೆಲವು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಪರಮ್ ಬಿರ್ ಸಿಂಗ್ ಪತ್ರದಲ್ಲಿ ಹೇಳಿದ್ದಾರೆ. ಆದರೆ ಆ ಸಮಯದಲ್ಲಿ ಅನಿಲ್ ದೇಶ್ ಮುಖ್ ಅವರು ಕೊರೊನಾ ಬಂದಿದ್ದರಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ರಾಜೀನಾಮೆ ನೀಡಬೇಕಾದ ಅಗತ್ಯವಿಲ್ಲ ಎಂದು ಹೇಳಿ ದೇಶ್‍ಮುಖ್ ಅವರನ್ನು ಸಮರ್ಥಿಸಿಕೊಂಡಿದ್ದರು.

ಶರದ್ ಪವಾರ್ ಈ ಹೇಳಿಕೆ ನೀಡುತ್ತಿದ್ದಂತೆ ದೇಶ್‍ಮುಖ್ ಅವರು ಮಾಡಿದ್ದ ಸುದ್ದಿಗೋಷ್ಠಿಯ ವಿಡಿತಯೋ ವೈರಲ್ ಆಗಿತ್ತು. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಶರದ್ ಪವಾರ್ ಅವರು ಹೇಳಿದಂತೆ ಅನಿಲ್ ದೇಶ್‍ಮುಖ್ ಫೆಬ್ರವರಿ 15ರಿಂದ 27ರವರೆಗೆ ಆಸ್ಪತ್ರೆಯಲ್ಲಿರಲಿಲ್ಲ. ಹೋಂ ಕ್ವಾರಂಟೈನ್ ನಲ್ಲಿದ್ದರು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದು ಅನಿಲ್ ದೇಶ್‍ಮುಖ್ ಮಾಡಿದ್ದ ವಿಡಿಯೋ ಟ್ವೀಟ್ ಅನ್ನು ರಿಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದರು.

Comments

Leave a Reply

Your email address will not be published. Required fields are marked *