166 ಮಂದಿ ಬಲಿಯಾಗಿ ಇಂದಿಗೆ 10 ವರ್ಷ

ಮುಂಬೈ: ವಾಣಿಜ್ಯ ನಗರಿ ಮುಂಬೈ ಉಗ್ರರ ದಾಳಿ ನಡೆದು 166 ಮಂದಿ ಬಲಿಯಾಗಿ ಇಂದಿಗೆ 10 ವರ್ಷಗಳು ಕಳೆದಿದೆ.

2008 ನವೆಂಬರ್ 26 ರಂದು ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರರು ಮುಂಬೈನಲ್ಲಿ ದಾಳಿ ನಡೆಸಿದ್ದರು. ಅಂದು ಸತತ ಮೂರು ದಿನಗಳ ಕಾಲ ಮುಂಬೈ ಭಯದಲ್ಲಿ ನಡುಗಿ ಹೋಗಿದ್ದು, ವಿಶ್ವಾದ್ಯಂತ ಸುದ್ದಿಯಾಗಿತ್ತು. ಈ ಭೀಕರ ಭಯೋತ್ಪಾದಕ ದಾಳಿಗೆ 166 ಮಂದಿ ಬಲಿಯಾಗಿದ್ದರು.

ನವೆಂಬರ್ 26 ರಂದು ಪಾಕಿಸ್ತಾನದ 10 ಮಂದಿ ಉಗ್ರರು ಭಾರತದತ್ತ ಪ್ರಯಾಣಿಸಿದ್ದರು. ಬಳಿಕ ಗುರುತು ಮರೆಸಿಕೊಂಡು ಮುಂಬೈಗೆ ಎಂಟ್ರಿಕೊಟ್ಟಿದ್ದು, ಮೂರು ದಿನಗಳ ಕಾಲ ತಾಜ್ ಹೋಟೆಲ್, ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ, ಆಸ್ಪತ್ರೆ, ರೆಸ್ಟೊರೆಂಟ್, ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಬಾಂಬ್ ಸ್ಫೋಟ ಹಾಗೂ ಗುಂಡಿನ ದಾಳಿ ನಡೆದ್ದರು. ಈ ದಾಳಿಯಿಂದ 166 ಜನರು ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಭಯೋತ್ಪಾದಕರ ದಾಳಿಯ ಬಗ್ಗೆ ತಿಳಿಯುತ್ತಿದ್ದಂತೆ ಜನರ ರಕ್ಷಣೆಗೆ ಪೊಲೀಸರು ದೌಡಾಯಿಸಿದ್ದರು. ಆದರೆ ಈ ದಾಳಿಯಲ್ಲಿ ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್, ಅಶೋಕ್ ಕಾಮ್ಟೆ ಮತ್ತು ತುಕಾರಾಮ್ ಓಂಬ್ಳೆ ಮತ್ತು ಯೋಧ ಸಂದೀಪ್ ಉನ್ನಿಕೃಷ್ಣನ್ ಉಗ್ರರಿಂದ ಹತರಾಗಿದ್ದರು. ಇನ್ನೂ 10 ಉಗ್ರರಲ್ಲಿ 9 ದಾಳಿಕೋರರನ್ನು ಭದ್ರತಾ ಪಡೆ ಕೊಂದು ಹಾಕಿತ್ತು.

ಜೀವಂತ ಸೆರೆ ಹಿಡಿದಿದ್ದ ಅಜ್ಮಲ್ ಕಸಬ್ ನನ್ನು ನಾಲ್ಕು ವರ್ಷಗಳ ಬಳಿಕ 2012ರ ನವೆಂಬರ್ 21ರಂದು ಗಲ್ಲಿಗೇರಿಸಲಾಯಿತು. ಇಂದಿಗೆ ದಾಳಿ ನಡೆದು ಹತ್ತು ವರ್ಷಗಳಾಗಿದೆ. ಆದರೆ ಪಾಕಿಸ್ತಾನ ಮಾತ್ರ ಸಂಚುಕೋರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *