ಚಾಕ್ಲೇಟ್ ಆಸೆಗಾಗಿ ಹೋದ 10ರ ಬಾಲಕನನ್ನು ರೇಪ್ ಮಾಡಿ ಕೊಂದ ತಂದೆಯ ಗೆಳೆಯ!

ನವದೆಹಲಿ: ತಂದೆಯ ಗೆಳೆಯನಿಂದಲೇ 10 ವರ್ಷದ ಬಾಲಕನೊಬ್ಬ ಬರ್ಬರವಾಗಿ ಹತ್ಯೆಗೀಡಾದ ಘಟನೆ ದೆಹಲಿಯ ಶಾಲಿಮರ್ ಬಾಗ್ ನಲ್ಲಿ ಶನಿವಾರ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.

ಮನೋಜ್, ತಂದೆಯ ಗೆಳೆಯನೇ ಆಗಿದ್ದು, ಇದೀಗ ಬಾಲಕನನ್ನು ಕೊಂದ ಆರೋಪಿಯಾಗಿದ್ದಾನೆ. ಸದ್ಯ ಈತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಘಟನೆ?: ಬಾಲಕ ತನ್ನ ಪೋಷಕರೊಂದಿಗೆ ಶಾಲಿಮಾರ್ ಬಾಗ್ ನ ಗ್ರಾಮವೊಂದರಲ್ಲಿ ವಾಸಿಸುತ್ತಿದ್ದನು. ಶನಿವಾರ ಸಂಜೆ ಬಾಲಕ ಮನೆ ಹೊರಗಡೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಮನೋಜ್ ಬಾಲಕನನ್ನು ಮಾತನಾಡಿಸಿದ್ದಾನೆ. ಅಲ್ಲದೇ ಚಾಕ್ಲೇಟ್ ಕೊಡಿಸುತ್ತೇನೆಂದು ಆತನನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ನಿರ್ಜನ ಪ್ರದೇಶವಾದ ಭಾಲ್ಸ್ವಾ ಕಾಲುವೆಯ ಬಳಿ ಕರೆದೊಯ್ದು ಮದ್ಯಪಾನ ಮಾಡಿಸಿ ಅತ್ಯಾಚಾರವೆಸಗಿದ್ದಾನೆ. ಇದರಿಂದ ಗಾಬರಿಗೊಂಡ ಬಾಲಕ ಸಹಾಯ ಮಾಡುವಂತೆ ಜೋರಾಗಿ ಕಿರುಚಿಕೊಂಡಿದ್ದಾನೆ. ಈ ವೇಳೆ ಆತಂಕಗೊಂಡ ಮನೋಜ್ ಬಾಲಕ ಕಿರುಚುವುದನ್ನು ನಿಲ್ಲಿಸಲೆಂದು ಕುತ್ತಿಗೆ ಹಿಡಿದಿದ್ದಾನೆ. ಮೊದಲೇ ಮದ್ಯದ ಅಮಲಿನಲ್ಲಿದ್ದ ಮನೋಜ್, ಬಾಲಕನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಬಾಲಕ ಉಸಿರುಗಟ್ಟಿ ಮೃತಪಟ್ಟಿದ್ದಾನೆ.

ಇತ್ತ ಆಟವಾಡುತ್ತಿದ್ದ ಬಾಲಕ ಇಲ್ಲದಿರುವುದನ್ನು ಮನಗಂಡ ಪೋಷಕರು ಶನಿವಾರ ರಾತ್ರಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಐಪಿಸಿ ಸೆಕ್ಷನ್ 363(ಅಪಹರಣ) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದಾರೆ. ಬಾಲಕ ವ್ಯಕ್ತಿಯ ಜೊತೆ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಸ್ಥಳೀಯರು ಕೂಡ ವ್ಯಕ್ತಿಯೊಬ್ಬರ ಜೊತೆ ಬಾಲಕ ಭಾಲ್ಸವಾ ಕಡೆ ತೆರಳುತ್ತಿರುವುದನ್ನು ನೋಡಿರುವುದಾಗಿ ಪೊಲೀಸರ ಜೊತೆ ಹೇಳಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮಧ್ಯರಾತ್ರಿ 3.30ರ ಸುಮಾರಿಗೆ ಮನೋಜ್ ನನ್ನು ಬಂಧಿಸಿದ್ದಾರೆ. ಈ ವೇಳೆ ಆತ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ನಂತರ ಕಾಲುವೆಯಲ್ಲಿದ್ದ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ವೇಳೆ ಬಾಲಕನ ಮೇಲೆ ಅತ್ಯಾಚಾರವೆಸಗಿರುವುದು ಬೆಳಕಿಗೆ ಬಂದಿದೆ.

ಮರಣೋತ್ತರ ಪರೀಕ್ಷೆಯ ಬಳಿಕ ಬಾಲಕನ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಆರೋಪಿ ಮನೋಜ್ ಮೇಲೆ ಈ ಹಿಂದೆಯೂ ಇಂತಹ ಕೃತ್ಯಗಳನ್ನು ಎಸಗಿದ್ದನು ಎಂಬುದಾಗಿ ವರದಿಯಾಗಿದೆ.

Comments

Leave a Reply

Your email address will not be published. Required fields are marked *