ಕನ್ನಡ ಸಿನಿಮಾಗಳಿಗೆ ಬರೋಬ್ಬರಿ 10 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಬೆಂಗಳೂರು: 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು, ಈ ಬಾರಿ ಕನ್ನಡಕ್ಕೆ ಬರೋಬ್ಬರಿ 10 ಪ್ರಶಸ್ತಿಗಳು ಲಭಿಸಿದೆ. ಆ ಮೂಲಕ ಭಾರತೀಯ ಭಾಷೆಗಳ ಪೈಕಿ ಅತೀ ಹೆಚ್ಚು ಪ್ರಶಸ್ತಿ ಕನ್ನಡಕ್ಕೆ ಒಲಿದಿದೆ.

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿದೆ. ಅಲ್ಲದೇ ಒಂದು ಸಿನಿಮಾ ನ್ಯಾಷನಲ್ ಫಿಲ್ಮ್ ಆರ್ಕೈವ್‍ಗೆ ಆಯ್ಕೆಯಾಗಿದೆ.

‘ರಾಮ ರಾಮ ರೇ’ ಸಿನಿಮಾ ನಿರ್ದೇಶನ ಮಾಡಿದ್ದ ಸತ್ಯ ಪ್ರಕಾಶ್ ಅವರ ಒಂದಲ್ಲ ಎರಡಲ್ಲ ಸಿನಿಮಾ ರಾಷ್ಟ್ರೀಯ ಏಕೀಕರಣ ಮತ್ತು ಅತ್ಯುತ್ತಮ ಬಾಲ ನಟ ಪ್ರಶಸ್ತಿ ವಿಭಾಗದಲ್ಲಿ ಆಯ್ಕೆ ಆಗಿದೆ. ಅಲ್ಲದೇ ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು ಸಿನಿಮಾ ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದಿದೆ.

ನಿರ್ದೇಶಕ ಮಂಸೋರೆ ನಿರ್ದೇಶನದಲ್ಲಿ ಮೂಡಿ ಬಂದಿದ್ದ ನಾತಿಚರಾಮಿ ಸಿನಿಮಾ ಬರೋಬ್ಬರಿ 5 ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ, ಅತ್ಯುತ್ತಮ ಹಿನ್ನೆಲೆ ಗಾಯಕಿ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಎಡಿಟಿಂಗ್ ಹಾಗೂ ಸಿನಿಮಾ ನಟಿ ಶೃತಿ ಹರಿಹರನ್ ಅವರಿಗೆ ವಿಶೇಷ ಅಭಿನಯದ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.

ಇಡೀ ಭಾರತ ಚಿತ್ರರಂಗವನ್ನೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿದ್ದ ಕೆಜಿಎಫ್ ಸಿನಿಮಾಗೆ ಅತ್ಯುತ್ತಮ ವಿಎಫ್‍ಎಕ್ಸ್ ಹಾಗೂ ಅತ್ಯುತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಮುಕಜ್ಜಿಯ ಕನಸುಗಳು ಸಿನಿಮಾ ನ್ಯಾಷನಲ್ ಫಿಲ್ಮ್ ಆರ್ಕೈವ್‍ಗೆ ಆಯ್ಕೆ ಆಗಿದೆ. ಈ ಬಾರಿಯ ಪ್ರಶಸ್ತಿಯ ರೇಸ್‍ನಲ್ಲಿ 40ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಆಯ್ಕೆಯಾಗಿದ್ದವು.

Comments

Leave a Reply

Your email address will not be published. Required fields are marked *