ಬಿಜೆಪಿ ಸರ್ಕಾರದಲ್ಲಿ 10% ಕಮಿಷನ್, ಕಾಂಗ್ರೆಸ್ ಅವಧಿಯಲ್ಲಿ ಇನ್ನೂ ಜಾಸ್ತಿ: ಹೆಚ್‍ಡಿಕೆ

ಬೆಂಗಳೂರು: ಬಿಜೆಪಿ ಪಕ್ಷ ಸರ್ಕಾರ ಆಡಳಿತದಲ್ಲಿದ್ದ ಅವಧಿಯಲ್ಲಿ 10% ಕಮಿಷನ್ ಪಡೆಯುತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಇದು ಇನ್ನೂ ಜಾಸ್ತಿಯಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಫೆಬ್ರವರಿ 17 ರಂದು ಯಲಹಂಕದ ಬಳಿ ನಡೆಯುವ ವಿಕಾಸ ಪರ್ವ ಯಾತ್ರೆ ವೇದಿಕೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಿ ಮಾತನಾಡಿದ ಅವರು ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಅವರಿಗೆ ಬಿಜೆಪಿ ಆಡಳಿತ ಅವಧಿಯಲ್ಲಿ ಪಡೆಯುತ್ತಿದ್ದ ಕಮಿಷನ್ ಬಗ್ಗೆ ಮಾತ್ರ ಮಾಹಿತಿ ನೀಡಲಾಗಿದೆ. ಆದರೆ ಅದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೆಚ್ಚಳವಾಗಿರುವ ಬಗ್ಗೆ ಮಾಹಿತಿ ನೀಡಿಲ್ಲ ಎಂದರು.

ಇದೇ ವೇಳೆ ಕೆಂಪೇಗೌಡ ಲೇಔಟ್ ರಸ್ತೆಗೆ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿರುವ ಬಿಡಿಎ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು ಬಿಡಿಎ ದಿವಾಳಿಯಾಗಿದೆ. ಹಣ ದರೋಡೆ ಮಾಡಲು ಸರ್ಕಾರ ಮುಂದಾಗಿದೆ. ಸಿಡಿಪಿ ಪ್ಲಾನ್ ಕ್ಲಿಯರ್ ಮಾಡಲು ತರಾತುರಿಯಲ್ಲಿ ಮುಂದಾಗಿದ್ದಾರೆ. ಒಂದು ಕಿಲೋಮೀಟರ್ ಗೆ 39 ಕೋಟಿ ಬೇಕಾ? ಇವರು ಬೆಳ್ಳಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರ ಎಂದು ಖಾರವಾಗಿ ಪ್ರಶ್ನಿಸಿದರು.

ಅರ್ಕಾವತಿ ಡಿನೋಟಿಫೈ ಅಕ್ರಮದಲ್ಲಿ ಕೆಂಪಣ್ಣ ವರದಿ ಏನು ಆಯ್ತು? ರಿಡೂ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಏನು ಮಾಡುತ್ತಿದ್ದಾರೆ ನನಗೆ ಗೊತ್ತು. ನ್ಯಾ. ಕೆಂಪಣ್ಣ ವರದಿ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.

ನೀರಾವರಿ ಯೋಜನೆ ಪ್ಯಾಕೇಜ್ ಹೊರ ರಾಜ್ಯದವರಿಗೆ ನೀಡಲಾಗುತ್ತಿದೆ. ನೀರಾವರಿ ಯೋಜನೆ ಹೊರ ರಾಜ್ಯದವರಿಗೆ ಏಕೆ ಗುತ್ತಿಗೆ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಗುತ್ತಿಗೆದಾರರು ಇಲ್ವಾ? ಕಮಿಷನ್ ಕಡಿಮೆ ಸಿಗುತ್ತೆ ಎಂದು ಹೊರ ರಾಜ್ಯದವರಿಗೆ ಗುತ್ತಿಗೆ ನೀಡಲಾಗಿದೆ ಎಂದು ಟಾಂಗ್ ನೀಡಿದರು.

Comments

Leave a Reply

Your email address will not be published. Required fields are marked *