ಕೃಷ್ಣಾ ನದಿಯಿಂದ ಹೊರಬಂದ 10 ಅಡಿ ಉದ್ದದ ಮೊಸಳೆ!

ಚಿಕ್ಕೋಡಿ: ಕೃಷ್ಣಾ ನದಿಯಲ್ಲಿ ನೀರು ಬರಿದಾಗಿದ್ದರಿಂದ ಮೊಸಳೆಗಳು ಹೊರಬರುತ್ತಿರೋ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನಡೆದಿದೆ.

ನದಿಯಿಂದ ಹೊರಬಂದ 10 ಅಡಿ ಉದ್ದದ ಮೊಸಳೆ ನೇಮಗೌಡರ ತೋಟದಲ್ಲಿ ಕಂಡುಬಂದಿದೆ. ಕೂಡಲೇ ಗ್ರಾಮಸ್ಥರು ಸೇರಿ ಮೊಸಳೆಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ನೀರಿಲ್ಲದೆ ಬರಿದಾಗಿರೋ ಕೃಷ್ಣಾ ನದಿ ತೀರದ ಕಬ್ಬಿನ ಗದ್ದೆಯಲ್ಲಿ ಈ ಮೊಸಳೆ ಜಾನುವಾರುಗಳ ಮೇಲೆ ದಾಳಿ ಮಾಡಿತ್ತು. ಹೀಗಾಗಿ ಮೊಸಳೆಯನ್ನು ಸೆರೆ ಹಿಡಿದು ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಹಗ್ಗದಿಂದ ಮೊಸಳೆ ಕಟ್ಟಿ ಹಾಕಿ ಝುಂಜರವಾಡ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಇನ್ನೂ ಮೇಲಿಂದ ಮೇಲೆ ನದಿ ತೀರದಲ್ಲಿ ಕಾಣಿಸಿಕೊಳ್ಳುತ್ತಿರುವ ಮೊಸಳೆಗಳಿಂದ ನದಿ ತೀರದ ಜನರಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಪದೇ ಪದೇ ಮೊಸಳೆ ಕಾಣಿಸಿಕೊಳ್ಳುತ್ತಿದ್ದರೂ ಮೊಸಳೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *