ಮಹಾರಾಷ್ಟ್ರ | ಬಸ್ ಪಲ್ಟಿ – 12 ಮಂದಿ ಸಾವು, 30 ಜನರಿಗೆ ಗಾಯ

ಮುಂಬೈ: ಸಾರಿಗೆ ಬಸ್ (Bus) ಪಲ್ಟಿಯಾದ (Accident) ಪರಿಣಾಮ 12 ಜನ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ (Maharashtra) ಗೊಂಡಿಯಾ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.

ಬಸ್ ಭಂಡಾರಾ ಡಿಪೋದಿಂದ ಗೊಂಡಿಯಾಗೆ ತೆರಳುತ್ತಿತ್ತು. ಈ ವೇಳೆ ಗೊಂಡಿಯಾ – ಅರ್ಜುನಿ ರಸ್ತೆಯ ಬಿಂದ್ರವನ ಟೋಲಾ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಪರಿಣಾಮ 12 ಜನ ಸಾವನ್ನಪ್ಪಿದ್ದು, ಸುಮಾರು 30 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗೊಂಡಿಯಾ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಂತ್ರಸ್ತರಿಗೆ ತಕ್ಷಣದ ಪರಿಹಾರವಾಗಿ 10 ಲಕ್ಷ ರೂ. ನೆರವು ನೀಡುವಂತೆ ಸಾರಿಗೆ ಆಡಳಿತಕ್ಕೆ ಆದೇಶಿಸಿದ್ದಾರೆ.

ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅವರು, ಅಪಘಾತದಲ್ಲಿ ಜೀವಹಾನಿಯಿಂದ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಬರೆದುಕೊಂಡಿದ್ದಾರೆ.