ಕದನ ವಿರಾಮ ಉಲ್ಲಂಘಿಸಿದ ಪಾಕ್ – ಗುಂಡೇಟಿಗೆ 10 ದಿನದ ಕಂದಮ್ಮ ಬಲಿ

ಶ್ರೀನಗರ: ಗಡಿಯಲ್ಲಿ ಮತ್ತೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿ ದಾಳಿ ನಡೆಸಿದ್ದು, ಈ ಗುಂಡಿನ ಚಕಮಕಿಯಲ್ಲಿ 10 ದಿನದ ಶಿಶು ಸಾವನ್ನಪ್ಪಿ, ಇಬ್ಬರು ಸಾರ್ವಜನಿಕರು ಗಾಯಗೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ (ಎಲ್‍ಒಸಿ) ಪಕ್ಕದ ಕೃಷ್ಣ ಕಣಿವೆ, ಮೆಂದರ್ ಮತ್ತು ಮಂಕೋಟ್ ವಲಯದಲ್ಲಿ ಪಾಕಿಸ್ತಾನ ಮತ್ತೆ ಗುಂಡಿನ ದಾಳಿ ನಡೆಸಿದೆ. ಭಾನುವಾರ ರಾತ್ರಿ ಈ ದಾಳಿ ನಡೆಸಿದ್ದು, ಗುಂಡೇಟಿಗೆ 10 ದಿನ ಶಿಶು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಚೋದನೆಯಿಲ್ಲದೆ ಗುಂಡು ಹಾರಿಸುವ ಮೂಲಕ ಪಾಕಿಸ್ತಾನವು ಭಾರತೀಯ ಚೆಕ್‍ಪೋಸ್ಟ್ ಗಳು ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿದೆ. ದಾಳಿಯಲ್ಲಿ ಒಟ್ಟು ಮೂವರು ಗಾಯಗೊಂಡಿದ್ದರು. ಅವರನ್ನು ಕೂಡಲೇ ಪೂಂಚ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಗುಂಡೇಟು ತಗುಲಿ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣಬಿಟ್ಟಿದೆ. ಸದ್ಯ ಗಾಯಗೊಂಡ ಇಬ್ಬರನ್ನು ಜಮ್ಮುವಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಕ್ ಸೈನ್ಯ ಏಕಾಏಕಿ ದಾಳಿ ನಡೆಸಲು ಆರಂಭಿಸಿದ ಕೂಡಲೇ ಭಾರತೀಯ ಯೋಧರು ಕೂಡ ಪ್ರತಿದಾಳಿ ನಡೆಸಿ ತಕ್ಕ ಉತ್ತರ ನೀಡಿದ್ದಾರೆ. ಕಳೆದ ಜುಲೈ 22ರಂದು ರಾಜೌರಿ ಪ್ರದೇಶದಲ್ಲಿ ಪಾಕ್ ನಡೆಸಿದ ದಾಳಿಗೆ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದರು. ಕೆಲವು ಸಾರ್ವಜನಿಕರು ಕೂಡ ಈ ದಾಳಿಯಲ್ಲಿ ಗಾಯಗೊಂಡಿದ್ದರು.

ಪದೇ ಪದೇ ಗಡಿಯಲ್ಲಿ ಭಾರತ- ಪಾಕ್ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಕಾಶ್ಮೀರದಲ್ಲಿ ಭದ್ರತೆಯನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಉನ್ನತ ಮಟ್ಟದ ಸಭೆ ನಡೆಸಿದ್ದರು. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಅನ್ವಯ ಮುಂಜಾಗೃತಾ ಕ್ರಮವಾಗಿ 10 ಸಾವಿರ ಯೋಧರನ್ನು ಕಾಶ್ಮೀರ ಕಣಿವೆ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ಭಾರತದ ಮೇಲೆ ಪಾಕಿಸ್ತಾನ ಸೇನೆ ಹಾಗೂ ಉಗ್ರರು ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲು ಯೋಜನೆ ಹೂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಅಮರನಾಥ ಯಾತ್ರೆಗೆ ಬರುವ ಯಾತ್ರಾರ್ಥಿಗಳ ಮೇಲೆ ಕೂಡ ಉಗ್ರರು ದಾಳಿ ಮಾಡಲು ಹೊಂಚು ಹಾಕಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

Comments

Leave a Reply

Your email address will not be published. Required fields are marked *