ಮಂಗಳೂರು: ಕೊಡಗಿನ ಜೋಡುಪಾಲ, ಮದೆನಾಡಿನಲ್ಲಿ ದುರಂತ ಎದುರಾಗಿ ಹತ್ತು ದಿನ ಕಳೆದಿವೆ. ಆದರೂ ಅಲ್ಲಿನ ಮೂರು ಗ್ರಾಮಗಳ ಸಾವಿರಾರು ನಿವಾಸಿಗಳು ಇನ್ನು ಕಲ್ಲುಗುಂಡಿ, ಸಂಪಾಜೆಯಲ್ಲಿರುವ ಕೇಂದ್ರದಲ್ಲೇ ತಂಗಿದ್ದಾರೆ.
ಈ ನಡುವೆ ತಮ್ಮ ತಮ್ಮ ಮನೆಗಳನ್ನು ನೋಡಿ ಹೋಗಲು ಬರುವ ಬಹುತೇಕ ನಿವಾಸಿಗಳು ಅಲ್ಲಿಂದ ಸಾಮಾಗ್ರಿಗಳನ್ನು ಹೊತ್ತು ಒಯ್ಯುತ್ತಿದ್ದಾರೆ. ಕೆಲವು ಮನೆಗಳಿಗೆ ಹಾನಿ ಆಗದಿದ್ದರೂ, ಇಲ್ಲಿ ಮತ್ತೆ ಮಳೆಯಾಗಿ ಭೂಕುಸಿತವಾದರೆ ಅಪಾಯ ಅನ್ನುವ ಭಾವನೆ ನಿವಾಸಿಗಳಲ್ಲಿದೆ. ಹೀಗಾಗಿ ಸರ್ಕಾರದಿಂದ ಸೂಕ್ತ ಜಾಗದಲ್ಲಿ ಪುನರ್ವಸತಿ ಮಾಡಿಕೊಟ್ಟರೆ ತಮ್ಮ ಮನೆಗಳನ್ನು ಬಿಟ್ಟು ಅಲ್ಲಿಗೆ ತೆರಳಲು ರೆಡಿಯಾಗಿದ್ದಾರೆ. ಅದಕ್ಕಾಗಿ ಸ್ವಯಂಸೇವಕರ ಜೊತೆಗೆ ಮನೆಗೆ ತೆರಳಿ, ಅಗತ್ಯ ವಸ್ತುಗಳನ್ನು ಮೂಟೆ ಕಟ್ಟಿ ಸಂತ್ರಸ್ತರ ಕೇಂದ್ರಕ್ಕೆ ಹೊತ್ತು ತರುತ್ತಿದ್ದಾರೆ.

ಇತ್ತೀಚೆಗೆ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ತಜ್ಞರು ಸ್ಥಳ ಪರಿಶೀಲಿಸಿದ ಸಂದರ್ಭದಲ್ಲಿ ಜೋಡುಪಾಲ, ಮದೆನಾಡು, ಮಣ್ಣಂಗೇರಿ ಪ್ರದೇಶಗಳು ವಾಸಕ್ಕೆ ಯೋಗ್ಯವಲ್ಲ ಎಂದಿದ್ದರು. ಹೀಗಾಗಿ ದುರಂತದ ಭಯ ಸಂತ್ರಸ್ತರಲ್ಲಿ ಆವರಿಸಿದ್ದು, ಮತ್ತೆ ಬೆಟ್ಟಗಳ ಮಧ್ಯೆ ವಾಸ ಇರುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಇನ್ನೊಂದೆಡೆ ಘಟ್ಟಗಳ ವ್ಯಾಪ್ತಿಯಲ್ಲಿ ಈಗಾಗಲೇ ಬಿರುಕು ಬಿಟ್ಟು ನಿಂತಿರುವ ಕಾರಣ, ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಮಾನವ ವಾಸ ತಕ್ಕುದಾಗಿಲ್ಲವಾದರೆ, ಬಡವರಿಗೆ ಪ್ರತ್ಯೇಕ ವಸತಿ ನಿರ್ಮಿಸಿ, ಅಲ್ಲಿರುವ ಕಾಫಿ ಎಸ್ಟೇಟ್‍ಗಳನ್ನು ವಶಕ್ಕೆ ತೆಗೆದುಕೊಳ್ಳುವ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply