10 ದಿನಗಳಲ್ಲಿ ರೈತರಿಗೆ 565 ಕೋಟಿ ರೂಪಾಯಿ ಕಬ್ಬಿನ ಬಾಕಿ ಪಾವತಿ

– ಸಚಿವ ಎಂಟಿಬಿ ಎಚ್ಚರಿಕೆಗೆ ಮಣಿದ ಕಾರ್ಖಾನೆಗಳು

ಬೆಂಗಳೂರು: ರೈತರು ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆ ಮಾಡಿರುವ ಕಬ್ಬಿನ ಬಾಕಿ ಹಣವನ್ನು ಪಾವತಿ ಮಾಡುವಂತೆ ಸಕ್ಕರೆ ಹಾಗೂ ಪೌರಾಡಳಿತ ಖಾತೆ ಸಚಿವ ಎಂಟಿಬಿ ನಾಗರಾಜ್ ಅವರು ನೀಡಿದ ಎಚ್ಚರಿಕೆ ಫಲ ನೀಡಿದ್ದು ಕೇವಲ ಹತ್ತು ದಿನಗಳಲ್ಲಿ 565 ಕೋಟಿ ರೂಪಾಯಿ ಬಾಕಿ ಹಣ ರೈತರಿಗೆ ಪಾವತಿಯಾಗಿದೆ.

ರಾಜ್ಯದಲ್ಲಿ 2020-21 ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ 1324.49 ಕೋಟಿ ರೂಪಾಯಿಗಳನ್ನು ಬಾಕಿ ಇರಿಸಿಕೊಂಡಿದ್ದು, ಅದನ್ನು ಕೂಡಲೇ ಪಾವತಿಸುವಂತೆ ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ಅವರು ಈ ತಿಂಗಳ 18 ರಂದು ಎಚ್ಚರಿಕೆ ನೀಡಿದ್ದರು.

ಇದರಿಂದ ಎಚ್ಚೆತ್ತ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಳೆದ 10 ದಿನಗಳಲ್ಲಿ ಕಬ್ಬು ಬೆಳೆಗಾರರ 565 ಕೋಟಿ ರೂಪಾಯಿಗಳ ಬಾಕಿಯನ್ನು ಪಾವತಿ ಮಾಡಿದ್ದಾರೆ. ಇದರಿಂದಾಗಿ ಕಬ್ಬು ಬೆಳೆಗಾರರಿಗೆ ಪಾವತಿಸಬೇಕಿದ್ದ ಒಟ್ಟು ಬಿಲ್ಲಿನ ಮೊತ್ತವಾದ 13348.10 ಕೋಟಿ ರೂಪಾಯಿಗಳಲ್ಲಿ ಶೇಕಡಾ 95 ರಷ್ಟು ಅಂದರೆ 12669.01 ಕೋಟಿ ರೂಪಾಯಿಗಳನ್ನು ಪಾವತಿ ಮಾಡಿದಂತಾಗಿದೆ. ಇನ್ನು ಉಳಿದ ಬಾಕಿ ಹಣ ಶೇಕಡಾ ಐದರಷ್ಟಿರುವ 759.74 ಕೋಟಿ ರೂಪಾಯಿಗಳನ್ನು ಕೂಡಲೇ ಪಾವತಿಸದಿದ್ದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ಹಾಗೆಯೇ, ಸ್ಥಗಿತಗೊಂಡಿರುವ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಾದ ಹಳೆಯ ಬಾಕಿ ರೂ 28.38 ಕೋಟಿ ಇದ್ದು, ಈ ಕಾರ್ಖಾನೆಗಳಿಗೆ ಸೇರಿದ ಚರ ಮತ್ತು ಸ್ಥಿರಾಸ್ತಿಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿ ವಸೂಲಾತಿ ಕ್ರಮ ಜರುಗಿಸಲು ಈಗಾಗಲೇ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾಡಳಿತವು ಕೋವಿಡ್-19 ಕಾರ್ಯದಲ್ಲಿ ನಿರತವಾಗಿರುವುದರಿಂದ ಹರಾಜು ಪ್ರಕ್ರಿಯೆ ತಡವಾಗಿದ್ದು, ಕೋವಿಡ್ ನಂತರ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಿ ಕಬ್ಬು ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ರೈತರು ಯಾವುದೇ ಕಾರಣಕ್ಕೂ ದೃತಿಗೆಡುವುದು ಬೇಡ, ರೈತರ ಹಿತ ಕಾಪಾಡುವುದಕ್ಕೆ ಸದಾ ನಮ್ಮ ಸರ್ಕಾರ ಬದ್ದವಾಗಿದೆ. ಬಾಕಿ ಹಣ ಕೊಡಿಸುವ ಜವಾಬ್ದಾರಿ ನಮ್ಮದು ಎಂದು ಸಚಿವರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *