10 ಜಿಲ್ಲೆಗಳಲ್ಲಿ ಲಾಕ್‍ಡೌನ್ ಆಗುತ್ತಾ? – ಸುಳಿವು ನೀಡಿದ ಅಶೋಕ್

– ಎಲ್ಲೆಲ್ಲಿ ಹೋಗಬೇಕಾದವರು ಇದ್ದಾರೋ ಅವ್ರು ನಾಳೆಯೇ ಹೊರಟು ಬಿಡಿ
– 12 ಗಂಭೀರ ಜಿಲ್ಲೆಗಳೆಂದು ಗುರುತಿಸಿದ ಸರ್ಕಾರ

ಬೆಂಗಳೂರು: ಕೊರೊನಾ ಸ್ಪೀಡ್ ಕಟ್ ಮಾಡುವ ಹಿನ್ನೆಲೆಯಲ್ಲಿ ಏಳು ದಿನ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಲಾಕ್‍ಡೌನ್ ಮಾಡಲಾಗಿದೆ. ಸೋಮವಾರ ಜಿಲ್ಲಾಧಿಕಾರಿಗಳು ಜೊತೆ ಸಭೆ ಮಾಡಿದ ನಂತರ ಉಳಿದ ಜಿಲ್ಲೆಗಳನ್ನು ಲಾಕ್‍ಡೌನ್ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಅಶೋಕ್, ಬೆಂಗಳೂರು ಲಾಕ್‍ಡೌನ್ ಅವಧಿಯಲ್ಲಿ ವೈದ್ಯಕೀಯ ಸಂಬಂಧಿತ ಫ್ಯಾಕ್ಟರಿಗಳನ್ನು ತೆರೆಯಲು ಅವಕಾಶ ನೀಡಲು ಸಿಎಂ ಒಪ್ಪಿದ್ದಾರೆ. ಸದ್ಯಕ್ಕೆ ಒಂದು ವಾರಗಳ ಕಾಲ ಲಾಕ್‍ಡೌನ್ ಮಾಡಲು ತೀರ್ಮಾನ ಮಾಡಲಾಗಿದೆ. ಕೊರೊನಾ ಸ್ಪೀಡ್ ಕಟ್ ಮಾಡುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮಾಡಿದ್ದೇವೆ. ಸೋಮವಾರ ಒಂದು ವಾರದ ಲಾಕ್‍ಡೌನ್ ಮಾರ್ಗಸೂಚಿ ಪ್ರಕಟ ಮಾಡುತ್ತೇವೆ ಎಂದರು.

ಬೆಂಗಳೂರು ಲಾಕ್‍ಡೌನ್ ಸದ್ಯಕ್ಕೆ ಏಳು ದಿನ ಮಾತ್ರ. ಸ್ಪೀಡ್ ಯಾವ ರೀತಿ ಕಡಿಮೆ ಆಗುತ್ತದೆ ಎಂಬುದನ್ನು ನೋಡುತ್ತೇವೆ. ನಂತರ ವಿಸ್ತರಣೆ ಮಾಡಬೇಕೋ ಅಥವಾ ಬೇಡವೋ ಎಂದು ತಜ್ಞರ ವರದಿ ಪಡೆದು ಎರಡು ದಿನ ಮೊದಲೇ ತಿಳಿಸುತ್ತೇವೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದವರು ಮನೆಯಲ್ಲೇ ಇರಿ ಎಂದು ಜನರಲ್ಲಿ ಸರ್ಕಾರದ ಪರವಾಗಿ ಆರ್.ಅಶೋಕ್ ಕೈ ಮುಗಿದು ವಿನಂತಿ ಮಾಡಿದರು.

10 ಜಿಲ್ಲೆಗಳು ಯಾವುದು?
ಕೊರೊನಾ ಪಾಸಿಟಿವ್ ಪ್ರಕರಣ ಜಾಸ್ತಿ ಬಂದರೆ ಆ ಏರಿಯಾವನ್ನು ಸೀಲ್‍ಡೌನ್ ಮಾಡುವಂತೆ ಈಗಾಗಲೇ ಸೂಚನೆ ನೀಡಿದ್ದೇವೆ. ಸರ್ಕಾರ 12 ಜಿಲ್ಲೆಗಳನ್ನ ಗಂಭೀರ ಜಿಲ್ಲೆಗಳೆಂದು ಗುರುತಿಸಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರದಲ್ಲಿ ಈಗಾಗಲೇ ಲಾಕ್‍ಡೌನ್ ಜಾರಿಯಾಗಿದೆ. ಬಳ್ಳಾರಿ, ಕಲಬುರಗಿ, ಯಾದಗಿರಿ, ಬೀದರ್, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ವಿಜಯಪುರ, ಧಾರವಾಡ, ಮಂಡ್ಯ ಜಿಲ್ಲೆಗಳು ಗಂಭೀರ ಜಿಲ್ಲೆಗಳು ಎಂದು ಗುರುತಿಸಲಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗೆ ಬೇರೆ ಆದೇಶ, ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಜಿಲ್ಲೆಗಳಿಗೆ ಬೇರೆ ಆದೇಶವನ್ನು ಸಿಎಂ ಸೋಮವಾರ ಸಭೆಯಲ್ಲಿ ನೀಡಲಿದ್ದಾರೆ ಎಂದು ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ ಮಾಡಲಿದ್ದಾರೆ. ಹೆಚ್ಚು ಸಮಸ್ಯೆ ಇರುವ ಜಿಲ್ಲೆಗಳ ಜೊತೆ ಮೊದಲು ಮೀಟಿಂಗ್ ಮಾಡುತ್ತೇವೆ. ಕಡಿಮೆ ಸೋಂಕು ಇರುವ ಜಿಲ್ಲೆಗಳನ್ನ ಮಧ್ಯಾಹ್ನದ ಬಳಿಕ ಸಭೆ ಕರೆದಿದ್ದೇವೆ. 12 ಜಿಲ್ಲೆಗಳಲ್ಲಿ ಹೆಚ್ಚು ಗಂಭೀರತೆ ಇದೆ. ಲಾಕ್‍ಡೌನ್ ಬಗ್ಗೆ ನಾಳೆ ಸಿಎಂ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಎರಡು ಹಂತದಲ್ಲಿ ಲಾಕ್‍ಡೌನ್ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಆರ್.ಅಶೋಕ್ ಹೇಳಿದರು.

ಶನಿವಾರವೇ ಬೆಂಗಳೂರು ಲಾಕ್‍ಡೌನ್ ಘೋಷಣೆ ಮಾಡಿರುವ ಕಾರಣ ಎಲ್ಲೆಲ್ಲಿ ಹೋಗಬೇಕಾದವರು ಇದ್ದಾರೋ ಅವರು ನಾಳೆ ಹೋಗಬಹುದು. ಯಾರ‍್ಯಾರು ಹೋಗಬೇಕು ಅಂತ ಇದ್ದಾರೋ ಅವರು ನಾಳೆಯೇ ಹೊರಟು ಬಿಡಿ. ಈ ಬಾರಿ ಲಾಕ್‍ಡೌನ್‍ಗೆ ಪಾಸ್ ಬೇಡ. ಅಗತ್ಯ ವಸ್ತುಗಳ ಸೇವೆಗೆ ಐಡಿ ತೋರಿಸಿದರೆ ಸಾಕು ಎಂದರು.

ಆಸ್ಪತ್ರೆಗಳಲ್ಲಿ ಬೆಡ್ ಕೊರತೆಯ ಸಮಸ್ಯೆ ಇದೆ. ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಬೆಡ್ ಸಮಸ್ಯೆ ಇಲ್ಲ. ಖಾಸಗಿ ಆಸ್ಪತ್ರೆಗಳ ಬೆಡ್ ಸ್ಟ್ರೀಮ್ ಲೈನ್ ಮಾಡಿದರೆ ಬೆಂಗಳೂರಿನಲ್ಲಿ ಬೆಡ್ ಸಮಸ್ಯೆ ನೀಗುತ್ತದೆ. ಮಾನವೀಯತೆಯಿಂದ ಸಹಾಯ ಮಾಡಿ ಅಂತ ಖಾಸಗಿ ಆಸ್ಪತ್ರೆಗಳಿಗೆ ಮನವಿ ಮಾಡಿದ್ದೇವೆ ಎಂದು ಅಶೋಕ್ ಹೇಳಿದರು.

ಇಂದು ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದಲ್ಲಿ ಬೆಂಗಳೂರು ಲಾಕ್‍ಡೌನ್ ಮಾರ್ಗಸೂಚಿ ವಿಚಾರವಾಗಿದೆ ಮಹತ್ವದ ಸಭೆ ನಡೆದಿದೆ. ಕಂದಾಯ ಸಚಿವ ಆರ್.ಅಶೋಕ್, ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ಸೋಮವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಲಾಕ್‍ಡೌನ್ ಮಾರ್ಗಸೂಚಿ ಪ್ರಕಟ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *