10 ಆಸ್ಪತ್ರೆ ಸುತ್ತಿದ್ರೂ ಚಿಕಿತ್ಸೆ ಸಿಗದೆ ಮಗು ಸಾವು – ಸಿಎಂ ಮನೆ ಮುಂದೆ ತಂದೆ ಧರಣಿ

– ಧರಣಿ ನಡೆಸ್ತಿದ್ದ ಮಗುವಿನ ತಂದೆ ವಶಕ್ಕೆ

ಬೆಂಗಳೂರು: ಕೊರೊನಾ ನಡುವೆ ಸುಮಾರು 10 ಆಸ್ಪತ್ರೆಯನ್ನು ಸುತ್ತಿದರೂ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಮಗುವಿನ ತಂದೆ ಮುಖ್ಯಮಂತ್ರಿ ಮನೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದರು. ಇದೀಗ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಎಂ ಯಡಿಯೂರಪ್ಪ ಅವರ ಬೆಂಗಳೂರಿನ ಧವಳಗಿರಿ ನಿವಾಸದ ಮುಂದೆ ಮಗುವಿನ ತಂದೆ ಧರಣಿ ಕುಳಿತು ಪ್ರತಿಭಟನೆ ಮಾಡುತ್ತಿದ್ದರು. ತನಗಾದ ಅನ್ಯಾಯ ಬೇರೆಯವರಿಗೆ ಆಗದಿರಲಿ ಎಂದು ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದರು.

ಜುಲೈ 11 ರಂದು ಬೆಂಗಳೂರಿನ ಮಂಜುನಾಥ ನಗರದ ನಿವಾಸಿಯಾದ ವೆಂಕಟೇಶ್ ನಾಯ್ಡ್ ಅವರ ಒಂದು ತಿಂಗಳ ಮಗುವಿಗೆ ಚಿಕಿತ್ಸೆ ಸಿಗದೆ ಮೃತಪಟ್ಟಿತ್ತು. ಈ ಘಟನೆ ಜುಲೈ 16ರಂದು ತಡವಾಗಿ ಬೆಳಕಿಗೆ ಬಂದಿತ್ತು. ಈ ಘಟನೆಯ ಬಗ್ಗೆ ಡಿಸಿಎಂ ಹಾಗೂ ಸಚಿವರು ಕೂಡ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಸಿಎಂ ಯಡಿಯೂರಪ್ಪ ಮನೆ ಮುಂದೆ ನ್ಯಾಯ ಕೊಡಿಸಿ ಅಂತ ಮೃತ ಮಗುವಿನ ತಂದೆ ಮಗಳ ಫೋಟೋ ಹಿಡಿದು ಕಣ್ಣೀರು ಹಾಕಿದ್ದರು.

ಧರಣಿಗೆ ಇದು ಸರಿಯಾದ ಸಮಯವಲ್ಲ ಎಂದು ಧರಣಿ ನಿರತ ಮಗುವಿನ ತಂದೆ ವೆಂಕಟೇಶ್‍ನನ್ನ ಪೊಲೀಸರು ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ವೆಂಗಟೇಶ್ ಪೊಲೀಸರ ಮುಂದೆ ತನ್ನ ಸಂಕಟವನ್ನ ಹೇಳಿಕೊಳ್ಳುತ್ತಿದ್ದರು.

ನನ್ನ ಮಗು ಸಾವನ್ನಪ್ಪಿ ನಾಲ್ಕು ದಿನಗಳಾಗಿದೆ. ಇದುವರೆಗೂ ಅಧಿಕಾರಿಗಳು ಈ ರೀತಿ ಆಗದಂತೆ ತಡೆಯುತ್ತೇನೆ ಎಂದು ಆಶ್ವಾಸನೆ ಕೊಡುತ್ತಿದ್ದಾರೆ. ಆದ್ರೆ ಮತ್ತೆ ಮತ್ತೆ ಈ ರೀತಿ ಘಟನೆಗಳು ನಡೆಯುತ್ತಿದೆ. ನನಗೆ, ನನ್ನ ಮಗುವಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಗಂಟೆಗೆ ಗಂಟೆಗೆ ಒಬ್ಬೊಬ್ಬರ ಪ್ರಾಣ ಹೋಗುತ್ತಿದೆ. ಇನ್ನೂ ತಡ ಮಾಡಬೇಡಿ ದಯವಿಟ್ಟು ಖಾಸಗಿ ಆಸ್ಪತ್ರೆಗಳಿಗೆ ಆದೇಶ ಹೊರಡಿಸಿ. ನನ್ನ ಪ್ರಾಣ ಬೇಕಿದ್ದರೆ ಹೋಗಲಿ ನಾನು ಉಪವಾಸ ಮಾಡುತ್ತೇನೆ. 10 ದಿನ, ಒಂದು ತಿಂಗಳಾದರೂ ನಾನು ಕಾಯುತ್ತೇನೆ ಎಂದು ಮಗುವಿನ ತಂದೆ ಆಗ್ರಹಿಸಿದ್ದರು.

ಇದೀಗ ಸಿಎಂ ಮನೆ ಮುಂದೆ ಧರಣಿ ಮಾಡುತ್ತಿದ್ದ ಮಗುವಿನ ತಂದೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *