ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬ್ಯಾಟರಿ ಚಾರ್ಜಿಂಗ್ ವೇಳೆ ಸ್ಫೋಟ- ಓರ್ವ ಸಾವು, ನಾಲ್ವರು ಗಂಭೀರ

ನವದೆಹಲಿ: ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಮನೆಯಲ್ಲಿ ಚಾರ್ಜ್ ಮಾಡುತ್ತಿದ್ದ ವೇಳೆ ಸ್ಫೋಟಗೊಂಡಿದ್ದು, ಮನೆಯಲ್ಲಿದ್ದ ಒಬ್ಬರು ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದೆ.

ಗುರುಗ್ರಾಮ್ ಸೆಕ್ಟರ್ 44 ರ ಕನ್ಹೈ ಗ್ರಾಮದಲ್ಲಿ ಗುರುವಾರ ರಾತ್ರಿ ಸುರೇಶ್ ಸಾಹು(60) ಅವರ ಮನೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬ್ಯಾಟರಿಯನ್ನು ಚಾರ್ಜ್ ಮಾಡಲು ರೂಮ್ ನಲ್ಲಿ ಹಾಕಲಾಗಿತ್ತು. ಈ ವೇಳೆ ಅವರ ಮನೆಯ ರೂಮ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದರಿಂದ ತಪ್ಪಿಸಿಕೊಂಡು ಹೋಗುವಷ್ಟರಲ್ಲಿ ಮನೆಯ ಸುತ್ತ ಹೊಗೆ ಮತ್ತು ಬೆಂಕಿ ಸುತ್ತಿಕೊಂಡಿದೆ. ಈ ಪರಿಣಾಮ ಮನೆಯ ಮಾಲೀಕ ಸುರೇಶ್ ಅವರು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದು, ನೆರೆಹೊರೆಯವರು ಮನೆಯ ಕಿಟಕಿಯನ್ನು ಒಡೆದು ಕೋಣೆಯಲ್ಲಿ ಸಿಲುಕಿಕೊಂಡಿದ್ದ ಕುಟುಂಬದ ಸದಸ್ಯರನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಮಹಾತ್ಮರ ಪುತ್ಥಳಿ ಹಾಳು ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ: ಬಿಎಸ್‍ವೈ

ಘಟನೆ ನಡೆದಾಗ ಸುರೇಶ್ ಸಾಹು ಅವರ ಪತ್ನಿ ರೀನಾ(50), ಮಕ್ಕಳಾದ ಮನೋಜ್(25), ಸರೋಜ್(18) ಮತ್ತು ಅನುಜ್ (14) ಅವರ ಪಕ್ಕದಲ್ಲಿ ಮಲಗಿದ್ದರು. ಈ ವೇಳೆ ಎಲೆಕ್ಟ್ರಿಕ್ ದ್ವಿಚಕ್ರದ ಬ್ಯಾಟರಿಯನ್ನು ಚಾರ್ಜ್ ಮಾಡಲು ಇಡಲಾಗಿದೆ. ಆದರೆ ಅದು ಸ್ಫೋಟಗೊಂಡಿದ್ದು, ಅವರು ಮಲಗಿಕೊಂಡಿದ್ದ ಹಾಸಿಗೆಗೆ ಬೆಂಕಿ ಹೊತ್ತಿಕೊಂಡಿದೆ. ಶೀಘ್ರದಲ್ಲೇ ಅದು ಇಡೀ ಕೋಣೆಗೆ ಹರಡಿದೆ. ಈ ಹಿನ್ನೆಲೆ ಇಡೀ ಕುಟುಂಬ ರೂಮ್ ನಲ್ಲಿ ಸಿಲುಕಿಕೊಂಡಿದ್ದು, ನೆರೆಹೊರೆಯವರು ಅವರನ್ನು ರಕ್ಷಿಸಲು ಕಿಟಕಿಯನ್ನು ಒಡೆದಿದ್ದಾರೆ.

ಈ ಕುರಿತು ಅವರ ನೆರೆ ಮನೆಯ ರಮೇಶ್ ಕುಮಾರ್ ಮಾತನಾಡಿದ್ದು, ನಾವು ಬಾಗಿಲು ತೆರೆಯಲು ಪ್ರಯತ್ನಿಸಿದೆವು. ಆದರೆ ಅದು ಒಳಗಿನಿಂದ ಲಾಕ್ ಆಗಿತ್ತು. ಕೊಠಡಿಯಲ್ಲಿ ಹೊಗೆ ತುಂಬಿದ್ದರಿಂದ ಅವರ ಕುಟುಂಬದವರು ಒಳಗೆ ಸಿಲುಕಿಕೊಂಡಿದ್ದರು. ಅದಕ್ಕೆ ಅವರ ಮನೆಯ ಕಿಟಕಿಯನ್ನು ಒಡೆದು ಮನೆಯವರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದರು.

ತಕ್ಷಣ ಈ ಬಗ್ಗೆ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ಬೆಂಕಿಯನ್ನು ನಿಯಂತ್ರಿಸಲು ಸುಮಾರು ಒಂದು ಗಂಟೆ ಬೇಕಾಯಿತು. ಈ ಕುಟುಂಬದ ಎಲ್ಲರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್‍ಜಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದರು.

ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್(ಎಸ್‍ಎಚ್‍ಒ) ಕುಲದೀಪ್ ದಹಿಯಾ ಈ ಕುರಿತು ಪ್ರತಿಕ್ರಿಯಿಸಿದ್ದು, ಈ ಸ್ಕೂಟರ್ ಅನ್ನು ತಮ್ಮ ಕೋಣೆಯ ಹೊರಗೆ ನಿಲ್ಲಿಸಿ ಒಳಗಿನಿಂದ ಚಾರ್ಜ್ ಮಾಡಲಾಗುತ್ತಿತ್ತು. ಈ ವೇಳೆ ಬ್ಯಾಟರಿ ಸ್ಫೋಟಗೊಂಡಿದ್ದು, ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಆಘಾತಕ್ಕೆ ಒಳಗಾದ ಕುಟುಂಬದ ಸದಸ್ಯರು ಚೇತರಿಸಿಕೊಂಡ ನಂತರ ಈ ಪ್ರಕರಣದ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ವಿಶ್ವದ ಅತ್ಯಂತ ಪ್ರಸಿದ್ಧ ವಾಸ್ತುಶಿಲ್ಪಿ ರಿಚರ್ಡ್ ರೋಜರ್ಸ್ ನಿಧನ

ಸಿವಿಲ್ ಆಸ್ಪತ್ರೆ ವಿಧಿವಿಜ್ಞಾನ ತಜ್ಞ ಡಾ ದೀಪಕ್ ಮಾಥುರ್, ಸಾಹು ಅವರು 70% ಸುಟ್ಟ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಇನ್ನೂಳಿದವರಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *