ಉಚಿತ ಬಸ್ ಸಂಚಾರಕ್ಕಾಗಿ 1 ಕೋಟಿ ದೇಣಿಗೆ ಕೊಟ್ಟ ಕೆಪಿಸಿಸಿ

– ಬಸ್ ಹತ್ತಿ ಕಾರ್ಮಿಕರ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ

ಬೆಂಗಳೂರು: ಕೂಲಿ ಕಾರ್ಮಿಕರಿಗೆ ಉಚಿತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವುದಕ್ಕಾಗಿ  ಕೆಪಿಸಿಸಿಯು  ಕೆಎಸ್‌ಆರ್‌ಟಿಸಿಗೆ 1 ಕೋಟಿ ರೂ. ದೇಣಿಗೆ ನೀಡಿದೆ.

ಬೆಂಗಳೂರಿನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರು ತಮ್ಮ ಊರಿಗೆ ಹೋಗಲು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ. ಹೀಗಾಗಿ ಅವರನ್ನು ಉಚಿತವಾಗಿ ಕರೆದೊಯ್ಯಲು ಕೆಪಿಸಿಸಿಯಿಂದ ಒಂದು ಕೋಟಿ ಚೆಕ್ ಅನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಎಂ ಕಳಸದ್ ಅವರಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದಾರೆ. ಅಷ್ಟೇ ಅಲ್ಲದೆ ಇನ್ನೂ ಹೆಚ್ಚಿನ ವೆಚ್ಚವಾದರೆ ಅದನ್ನು ಬರಿಸಲು ಕೆಪಿಸಿಸಿ ಸಿದ್ಧವಿದೆ ಎಂದು ತಿಳಿಸಿದ್ದಾರೆ.

ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ನಿಯೋಗ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದೆ. ಈ ವೇಳೆ ಸಿದ್ದರಾಮಯ್ಯ ಅವರು ಬಸ್ ಹತ್ತಿ ಪ್ರಯಾಣಿಕರ ಸಮಸ್ಯೆಯನ್ನು ಆಲಿಸಿ, ಅಭಯ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಕಾರ್ಮಿಕರಿಂದ ದುಪ್ಪಟ್ಟು ಹಣ ಪಡೆಯದಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದೆವು. ಆದರೆ ಅವರು ಉಚಿತ ಬಸ್ ಸೇವೆಯ ಬದಲು ಹಳೇ ದರದಲ್ಲಿ ಕಾರ್ಮಿಕರಿಂದ ಟಿಕೆಟ್ ಹಣ ಪಡೆಯುವಂತೆ ಆದೇಶ ನೀಡಿತ್ತು. ಹೀಗಾಗಿ ನಮ್ಮ ಪಕ್ಷ ಎಲ್ಲಾ ಮುಖಂಡರು ಚರ್ಚೆ ನಡೆಸಿ ಉಚಿತ ಬಸ್ ಸಂಚಾರಕ್ಕೆ 1 ಕೋಟಿ ರೂ. ದೇಣಿಗೆ ನೀಡಲು ನಿರ್ಧರಿಸಿದ್ದೆವು. ಇದರಿಂದಾಗಿ ಎಚ್ಚೆತ್ತ ರಾಜ್ಯ ಸರ್ಕಾರ ಕಾರ್ಮಿಕರಿಂದ ಯಾವುದೇ ರೀತಿ ಹಣ ಪಡೆಯದಂತೆ ರಾಜ್ಯ ಸಾರಿಗೆ ಇಲಾಖೆ ಸೂಚನೆ ನೀಡಿತು ಎಂದರು.

ಮೆಜೆಸ್ಟಿಕ್‍ನಲ್ಲಿ ಸಾವಿರಾರು ಜನರು ಸೇರಿದ್ದಾರೆ. ಹೀಗಾಗಿ ಅವರಿಗೆ ನೀರು, ಆಹಾರದ ವ್ಯವಸ್ಥೆಯನ್ನು ನಮ್ಮ ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ. ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಅದನ್ನು ಮರೆಯಬಾರದು ಎಂದು ಹೇಳಿದರು.

ಪ್ರಿಯಾಂಕ ಖರ್ಗೆ ಮಾತನಾಡಿ, ರಾಜ್ಯ ಸರ್ಕಾರ ಕನ್ನಡಿಗರಿಗೆ ಆದ್ಯತೆ ನೀಡುತ್ತಿಲ್ಲ. ಬೇರೆ ರಾಜ್ಯದಲ್ಲಿರುವ ಕಾರ್ಮಿಕರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ರಾಜ್ಯದ ಕಾರ್ಮಿಕರಿಗೆ ಉಚಿತವಾಗಿ ಕಳಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದೆವು. ನಮ್ಮ ಪಕ್ಷದ ವತಿಯಿಂದ ಅಳಿಲು ಸೇವೆ ಮಾಡಲಾಗುತ್ತದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *