ಹ್ಯಾಕಿಂಗ್ ಅಪಾಯದಲ್ಲಿ 100 ಕೋಟಿ ಆ್ಯಂಡ್ರಾಯ್ಡ್ ಮೊಬೈಲ್‍ಗಳು- ಯಾವ್ಯಾವ ಫೋನ್‍ ಅಪಾಯದಲ್ಲಿವೆ?

ಸ್ಯಾನ್ ಫ್ರಾನ್ಸಿಸ್ಕೋ: ಸುಮಾರು 1 ಬಿಲಿಯನ್(100 ಕೋಟಿ)ಗೂ ಹೆಚ್ಚು ಆಂಡ್ರಾಯ್ಡ್ ಮೊಬೈಲ್ ಹಾಗೂ ಟ್ಯಾಬ್ಲೆಟ್ಸ್ ಹ್ಯಾಕಿಂಗ್ ಅಪಾಯದಲ್ಲಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಕನ್ಸೂಮರ್ ವಾಚ್‍ಡಾಗ್ ಸಂಸ್ಥೆ ವ್ಹಿಚ್? ಬಹಿರಂಗಪಡಿಸಿದೆ.

ಸಂಶೋಧನಾ ವರದಿ ಪ್ರಕಾರ, ಆಂಡ್ರಾಯ್ಡ್ 4 (ಐಸ್‍ ಕ್ರೀಮ್‍ ಸ್ಯಾಂಡ್‍ವಿಜ್‍) ಹಾಗೂ ಇದಕ್ಕೂ ಹಳೆಯ ಸಾಫ್ಟ್ ವೇರ್ ಹೊಂದಿದ ಮೊಬೈಲ್‍ಗಳು ಹೆಚ್ಚು ಹ್ಯಾಕ್ ಗೆ ಒಳಗಾಗುತ್ತಿವೆ ಎಂದು ತಿಳಿದಿದೆ. ಮಾತ್ರವಲ್ಲದೆ ಅಪ್‍ಡೇಟ್ ಆಗದ ಆಂಡ್ರಾಯ್ಡ್ 7.0(ನೌಗಾಟ್‍) ಸಾಫ್ಟ್ ವೇರ್ ಹೊಂದಿದ ಮೊಬೈಲ್‍ಗಳೂ ಸಹ ಅಪಾಯದಲ್ಲಿವೆ ಎಂದು ವರದಿಯಲ್ಲಿ ತಿಳಿಸಿದೆ.

ಗೂಗಲ್ ಡಾಟಾ ಆಧರಿಸಿ ವ್ಹಿಚ್? ಸಂಸ್ಥೆ ವಿಶ್ಲೇಷಿಸಿದ್ದು, ವಿಶ್ವಾದ್ಯಂತ ಐದು ಆಂಡ್ರಾಯ್ಡ್ ಸಾಧನ ಬಳಕೆದಾರರ ಪೈಕಿ ಇಬ್ಬರು ಪ್ರಮುಖ ಅಪ್‍ಡೇಟ್‍ಗಳನ್ನು ಸ್ವೀಕರಿಸುತ್ತಿಲ್ಲ ಎಂದು ಹೇಳಲಾಗಿದೆ. ಪ್ರಸ್ತುತ ಈ ಡಿವೈಸ್‍ಗಳು ಸಮಸ್ಯೆ ಹೊಂದಿರುವ ಸಾಧ್ಯತೆ ಕಡಿಮೆ. ಆದರೆ ಸುರಕ್ಷತೆಯ ಕೊರತೆಯಿಂದಾಗಿ ಹ್ಯಾಕರ್ಸ್ ಸುಲಭವಾಗಿ ಅಟ್ಯಾಕ್ ಮಾಡಬಹುದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ದುಬಾರಿ ಆಂಡ್ರಾಯ್ಡ್ ಮೊಬೈಲ್‍ಗಳು ಭದ್ರತೆ ಕಳೆದುಕೊಳ್ಳುವ ಮೊದಲು ಕಡಿಮೆ ಅವಧಿಯಲ್ಲಿ ಹಾಳಾಗುತ್ತವೆ. ಆದರೆ ಲಕ್ಷಾಂತರ ಬಳಕೆದಾರರು ಹ್ಯಾಕರ್ಸ್ ಗೆ ಬಲಿಯಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವ್ಹಿಚ್? ಸಂಸ್ಥೆ ಸಂಪಾದಕ ಕೇಟ್ ಬೆವನ್ ಎಚ್ಚರಿಕೆ ನೀಡಿದ್ದಾರೆ.

ಗೂಗಲ್ ಹಾಗೂ ಮೊಬೈಲ್ ತಯಾರಿಕಾ ಸಂಸ್ಥೆಗಳು ಭದ್ರತಾ ನವೀಕರಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಒಂದು ಮೊಬೈಲ್ ಎಷ್ಟು ದಿನಗಳ ಕಾಲ ಸೇಫ್ ಆಗಿರುತ್ತದೆ. ಒಂದು ವೇಳೆ ಮೊಬೈಲ್ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸವಾದರೆ ಗ್ರಾಹಕರು ಏನು ಮಾಡಬೇಕು ಎಂಬುದರ ಕುರಿತು ಸೂಕ್ತ ಜಾಗೃತಿ, ಮಾಹಿತಿ ನೀಡಬೇಕು. ಸ್ಮಾರ್ಟ್ ಫೋನ್‍ಗಳ ಭದ್ರತಾ ನವೀಕರಣಗಳ ಕುರಿತು ಮೊಬೈಲ್ ತಯಾರಿಕಾ ಸಂಸ್ಥೆಗಳು ಪಾರದರ್ಶಕವಾಗಿರುವುದನ್ನು ತಿಳಿಯಲು ಸರ್ಕಾರಗಳು ಸಹ ಕಡ್ಡಾಯವಾಗಿ ಕಾನೂನು ರೂಪಿಸುವ ಅಗತ್ಯವಿದೆ ಎಂದು ಕೇಟ್ ಎಚ್ಚರಿಸಿದ್ದಾರೆ.

ಯಾವ ಫೋನ್‍ಗಳು ಅಪಾಯದಲ್ಲಿವೆ?
ಪ್ರಸಿದ್ಧ ಕಂಪನಿಯ ಮೊಬೈಲ್ ಗಳಾದ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್-3 ಹಾಗೂ ಸೋನಿ ಎಕ್ಸ್ ಪಿರಿಯಾ ಎಸ್ ಹೆಚ್ಚು ಅಪಾಯದಲ್ಲಿವೆಯಂತೆ. ಅಲ್ಲದೆ 2012ರ ಆಸುಪಾಸಿನಲ್ಲಿ ಬಿಡುಗಡೆಯಾದ ಮೊಬೈಲ್‍ಗಳು ಹ್ಯಾಕರ್ಸ್‍ಗೆ ಬಲಿಯಾಗುತ್ತಿವೆ ಎಂದು ವ್ಹಿಚ್? ಸಂಸ್ಥೆ ತಿಳಿಸಿದೆ.

ನೀವು ಏನು ಮಾಡಬೇಕು?
ಆಂಡ್ರಾಯ್ಡ್ ಬಳಕೆದಾರರು ಹಳೆಯ ಫೋನ್ ಹೊಂದಿದ್ದರೆ ಅಪಾಯವನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ವ್ಹಿಚ್? ಕಂಪನಿ ಸಲಹೆ ನೀಡಿದೆ. ಎರಡು ವರ್ಷಕ್ಕಿಂತ ಹಳೆಯದಾದ ಯಾವುದೇ ಆಂಡ್ರಾಯ್ಡ್ ಸಾಧನವನ್ನು ಆಪರೇಟಿಂಗ್ ಸಿಸ್ಟಂನ ಹೊಸ ವರ್ಷನ್‍ಗೆ ಅಪ್‍ಡೇಟ್ ಮಾಡಬಹುದೇ ಪರಿಶೀಲಿಸಿ. ಆಂಡ್ರಾಯ್ಡ್ 7.0 ನೌಗಾಟ್ ವರ್ಷನ್‍ಗಿಂತ ಹಳೆಯದಾಗಿದ್ದರೆ ಅಪ್‍ಡೇಟ್ ಮಾಡಲು ಯತ್ನಿಸಿ. ನಿಮ್ಮ ಮೊಬೈಲ್‍ನಲ್ಲಿ ಸೆಟ್ಟಿಂಗ್ಸ್- ಸಿಸ್ಟಮ್- ಅಡ್ವಾನ್ಸಡ್ ಸಿಸ್ಟಮ್ ಅಪ್‍ಡೇಟ್ ಮೂಲಕ ಮೊಬೈಲ್ ಅಪ್‍ಡೇಟ್ ಮಾಡಬಹುದು.

ಮೊಬೈಲ್ ಅಪ್‍ಡೇಟ್ ಆಗದಿದ್ದಲ್ಲಿ, ಆ ಮೊಬೈಲ್ ಆಂಡ್ರಾಯ್ಡ್ ವರ್ಷನ್ 4 ಅಥವಾ ಅದಕ್ಕಿಂತ ಹಳೆದಾಗಿದ್ದರೆ ಹ್ಯಾಕ್ ಆಗಿರುವ ಸಂಭವ ಹೆಚ್ಚು. ಅಲ್ಲದೆ ಗೂಗಲ್ ಪ್ಲೇ ಸ್ಟೋರ್ ಹೊರಗಿನಿಂದ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವ ಮುನ್ನ ಬಳಕೆದಾರರು ಎಚ್ಚರಿಕೆ ವಹಿಸಬೇಕು. ಆ್ಯಂಟಿ ವೈರಸ್ ಆ್ಯಪ್‍ನ್ನು ಸಹ ಡೌನ್‍ಲೋಡ್ ಮಾಡಿಕೊಳ್ಳಬೇಕು ಎಂದು ಸಂಸ್ಥೆ ತಿಳಿಸಿದೆ.

Comments

Leave a Reply

Your email address will not be published. Required fields are marked *