1.5 ಕೋಟಿಯ ದುಬಾರಿ ಸೆಟ್‍ನಲ್ಲಿ ‘ಪೊಗರು’ ಟೈಟಲ್ ಸಾಂಗ್‍ನ ಶೂಟಿಂಗ್

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲಾಕ್‍ಡೌನ್ ಅವಧಿಯನ್ನು ಮುಗಿಸಿ ಮತ್ತೆ ಚಿತ್ರೀಕಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಸದ್ಯಕ್ಕೆ ಧ್ರುವ ಬಹು ನಿರೀಕ್ಷೆಯ ‘ಪೊಗರು’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಈಗ ಮತ್ತೊಂದು ಹಾಡಿನ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

ಚಿತ್ರತಂಡ ‘ಪೊಗರು’ ಸಿನಿಮಾದ ಟೈಟಲ್ ಸಾಂಗ್ ಸೆರೆಹಿಡಿಯುತ್ತಿದೆ. ಈ ಹಾಡನ್ನು ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಲಾಗುತ್ತಿದೆ. ಅಲ್ಲದೇ ‘ಪೊಗರು’ ಚಿತ್ರದ ಟೈಟಲ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 1.50 ಕೋಟಿಯ ಸೆಟ್ ನಿರ್ಮಾಣ ಮಾಡಲಾಗಿದೆ ಎನ್ನಲಾಗಿದೆ. ಒಟ್ಟು ಆರು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆಯಲಿದ್ದು, ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ.

ದುಬಾರಿಯ ಸೆಟ್‍ನಲ್ಲಿ ಧ್ರುವ ಹಲವಾರು ನೃತ್ಯಗಾರ ಜೊತೆ ಡ್ಯಾನ್ಸ್ ಮಾಡಲಿದ್ದಾರೆ. ‘ಪೊಗರು ಅಣ್ಣನಿಗೆ ಪೊಗರು’ ಎನ್ನುವ ಸಾಲುಗಳಿಂದ ಈ ಹಾಡು ಪ್ರಾರಂಭವಾಗುತ್ತದೆ. ಈಗಾಗಲೇ ಸಿನಿಮಾದ ಶೀರ್ಷಿಕೆ ಗೀತೆಯನ್ನು ಸೆರೆಹಿಡಿಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ಒಂದು ಅದ್ಧೂರಿ ಸೆಟ್ ನಿರ್ಮಾಣ ಮಾಡಲಾಗುತ್ತಿದೆ. ಈ ಹಾಡಿನ ಚಿತ್ರೀಕರಣ ಸೆಪ್ಟಂಬರ್ 24ರಿಂದ ಅಂದರೆ ನಾಳೆಯಿಂದ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.

ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾಗೆ ಜೋಡಿಯಾಗಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಪೊಗರು’ ಕೂಡ ಮೊದಲ ಸಾಲಿನಲ್ಲಿದೆ. ಈಗಾಗಲೇ ಚಿತ್ರದಿಂದ ‘ಖರಾಬು’ ಹಾಡು ರಿಲೀಸ್ ಆಗಿದ್ದು, ದಾಖಲೆ ನಿರ್ಮಿಸಿದೆ. ಲಾಕ್‍ಡೌನ್ ಸಮಯದಲ್ಲಿ ಅಂದರೆ ಏಪ್ರಿಲ್‍ನಲ್ಲಿ ರಿಲೀಸ್ ಆದ ಈ ಹಾಡು ವೀಕ್ಷಣೆಯಲ್ಲಿ ಮತ್ತು ಟ್ರೆಂಡಿಂಗ್‍ನಲ್ಲಿ ಮೊದಲ ಸ್ಥಾನದಲ್ಲಿದೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರುತ್ತಿದೆ.

Comments

Leave a Reply

Your email address will not be published. Required fields are marked *