1.2 ಲಕ್ಷ ಹಣಕ್ಕಾಗಿ ಜಗಳ- ಗರ್ಭಿಣಿ ಹೊಟ್ಟೆಗೆ ಒದ್ದ ನೆರೆಮನೆಯವರು

– ಹೊಟ್ಟೆಯಲ್ಲಿದ್ದ 7 ತಿಂಗಳ ಮಗು ದುರ್ಮರಣ

ಲಕ್ನೋ: ಹಣಕ್ಕಾಗಿ ನಡೆದ ಜಗಳದಲ್ಲಿ ಹೊಟ್ಟೆಯಲ್ಲಿದ್ದ 7 ತಿಂಗಳ ಮಗು ದಾರುಣವಾಗಿ ಮೃತಪಟ್ಟ ಅಮಾನವೀಯ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಘುಕ್ನಾ ಗ್ರಾಮದಲ್ಲಿ ನಡೆದಿದೆ.

ಭಾನುವಾರ ಸಂಬಂಧಿಕರು, ಗೆಳೆಯರ ಜೊತೆ ಮಹಿಳೆಯ ಪತಿ ಪಟೇಲ್ ನಗರದಲ್ಲಿ ಈ ಸಂಬಂಧ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು. ಪೊಲೀಸರಿಗೆ ಲಿಖಿತ್ ದೂರು ನೀಡಿದ ಬಳಿಕವೂ ಆರೋಪಿಗಳ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮಹಿಳೆಯ ಕುಟುಂಬ ಆರೋಪಿಸಿದೆ.

ನಡೆದಿದ್ದೇನು?
ಘುಕ್ನಾ ಗ್ರಾಮದ ನಿವಾಸಿಯಾಗಿರುವ ಮಹಿಳೆಯ ಪತಿ ಸಂಜಯ್ ವರ್ಮಾ ಅವರು ಖಾಸಗಿ ಕಂಪನಿಯೊಂದರ ಉದ್ಯೋಗಿ. ಇವರು 2019 ರಲ್ಲಿ ಆರೋಪಿಗಳಿಂದ 1.2 ಲಕ್ಷ ರೂ. ಸಾಲ ಪಡೆದಿದ್ದರು. ಅಲ್ಲದೆ ಪತ್ನಿಯ ಚಿನ್ನಾಭರಣವನ್ನು ಅಡವಿಟ್ಟಿದ್ದರು. ಇದಾದದ ಬಳಿಕ ಅಂದರೆ ಇದೇ ತಿಂಗಳ 7ರಂದು ಸುಮಾರು 7 ಮಂದಿಯ ಗುಂಪೊಂದು ನೇರವಾಗಿ ಸಂಜಯ್ ಮನೆಗೆ ನುಗ್ಗಿ ಹಣ ಕೇಳಿದೆ. ಈ ವೇಳೆ ಸಂಜಯ್ ಪ್ರಸ್ತುತ ಪರಿಸ್ಥಿತಿಯಿಂದಾಗಿ ನನ್ನ ಸಂಬಳವನ್ನು ಕಂಪನಿ ಕಡಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ನನಗೆ ಸ್ವಲ್ಪ ಸಮಯ ನೀಡಿ ಎಂದು ವಿನಂತಿಸಿಕೊಂಡಿದ್ದಾರೆ.

ಸಂಜಯ್ ತಮ್ಮ ಕಷ್ಟ ಹೇಳುತ್ತಿದ್ದರೆ ಆರೋಪಿಗಳು ಅದನ್ನು ಕೇಳಿಸಿಕೊಳ್ಳಲು ನಿರಾಕರಿಸಿದ್ದಾರೆ. ಅಲ್ಲದೆ ಸಂಜಯ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇತ್ತ ಪತಿಯನ್ನು ರಕ್ಷಿಸಲು ಬಂದ 7 ತಿಂಗಳ ಗರ್ಭಿಣಿಯ ಹೊಟ್ಟೆಗೆ ಒದ್ದಿದ್ದಾರೆ. ಪರಿಣಾಮ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಭಾನುವಾರ ಪತ್ನಿಗೆ ಹೆರಿಗೆಯಾಗಿದ್ದು, ಮಗು ಮೃತಪಟ್ಟಿದೆ. ಮಗು ಮೃತಪಟ್ಟಿರುವುದರಿಂದ ಬೇಸರಗೊಂಡ ಸಂಜಯ್, ತನ್ನ ಪತ್ನಿಯ ಮೇಲಿನ ಹಲ್ಲೆಯಿಂದಾಗಿಯೇ ಮಗು ಸಾವನ್ನಪ್ಪಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಘಟನೆಯ ಬಳಿಕ ಮಹಿಳೆಯ ಕುಟುಂಬದವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಜಯ್ ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ವರ್ಮಾ ಅವರು ಪ್ರತಿಕ್ರಿಯಿಸಿ, ಜನಿಸಿದ ಮಗುವಿನ ಶವ ಪರೀಕ್ಷೆ ನಿರೀಕ್ಷೆಯಲ್ಲಿರುವುದರಿಂದ ಈ ಬಗ್ಗೆ ಎಫ್‍ಐಆರ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *