1 ವಾರ ಲಾಕ್‍ಡೌನ್‍ಗೂ ಮುನ್ನ ಎರಡು ದಿನ ಲಾಕ್ ಫ್ರೀ – 2 ದಿನ ಫ್ರೀ ನೀಡಿದ್ದು ಯಾಕೆ?

ಬೆಂಗಳೂರು: ಲಾಕ್‍ಡೌನ್ ಮಾಡಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಶನಿವಾರ ರಾತ್ರಿ ಒಂದು ವಾರಗಳ ಕಾಲ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರವನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಹೆಮ್ಮಾರಿಗೆ ಬ್ರೇಕ್ ಹಾಕಲು ಒಂದು ವಾರ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್ ಆಗಲಿದೆ. ಜುಲೈ 14 ಮಂಗಳವಾರ ರಾತ್ರಿ 8 ಗಂಟೆಯಿಂದ ಕಂಪ್ಲೀಟ್ ಲಾಕ್ ಆಗಲಿದ್ದು, ಜುಲೈ 22 ಬುಧವಾರ ಬೆಳಗ್ಗೆ 5 ಗಂಟೆವರೆಗೆ ಲಾಕ್‍ಡೌನ್ ಜಾರಿಯಲ್ಲಿರುತ್ತದೆ. ಆದರೆ ಸರ್ಕಾರ ಈ ಮಧ್ಯೆ ಜನರಿಗೆ ಎರಡು ದಿನ ಲಾಕ್ ಫ್ರೀ ಕೊಟ್ಟಿದೆ. ಅಂದರೆ ಸೋಮವಾರ ಮತ್ತು ಮಂಗಳವಾರ ರಾತ್ರಿ 8 ರವರೆಗೂ ಲಾಕ್ ಫ್ರೀ ನೀಡಲಾಗಿದೆ.

ಲಾಕ್‍ಡೌನ್ ಟೈಂಗೆ ಕಾರಣ?
* ತುರ್ತು ಕಾರಣಗಳಿಗಾಗಿ ಬೆಂಗಳೂರಿಗೆ ಬಂದೋರು ವಾಪಸ್ ತಮ್ಮ ಊರಿಗೆ ತೆರಳಲಿ.
* ಜನರು ಲಾಕ್‍ಡೌನ್ ಅಂತ ದಿಢೀರ್ ಆತಂಕವಾಗೋದು ಬೇಡ.
* ಲಾಕ್ ಡೌನ್ ಹಿನ್ನೆಲೆಯಲ್ಲಿ ಅಗತ್ಯ ದಿನಸಿ ವಸ್ತುಗಳು ಖರೀದಿ ಮಾಡಿಕೊಳ್ಳಲು ಸಮಯ.
* ದಿಢೀರ್ ಲಾಕ್‍ಡೌನ್‍ನಿಂದ ಜನ ತಮ್ಮ ತಮ್ಮ ಊರಿಗೆ ಹೋಗೋಕೆ ಮುಂದಾಗಿ ಟ್ರಾಫಿಕ್ ಜಾಮ್ ಆಗುತ್ತಿತ್ತು. ಹೀಗಾಗಿ ಎರಡು ದಿನ ಅವಕಾಶ ಕೊಟ್ಟು ಟ್ರಾಫಿಕ್ ಜಾಮ್ ತಡೆಯಬಹುದು.
* ಮನೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರೋರು ಅಗತ್ಯ ಚಿಕಿತ್ಸಾ ಸಾಮಾಗ್ರಿ ಖರೀದಿ ಮಾಡಿಕೊಳ್ಳಲಿ ಅಂತ.
* ಬಿಪಿ, ಶುಗರ್ ಇನ್ನಿತರ ಕಾಯಿಲೆ ಇರೋರು ಅಗತ್ಯ ಔಷಧಿಗಳನ್ನ ಖರೀದಿ ಮಾಡಕೊಳ್ಳಲಿ ಅಂತ.

ಈ ಎಲ್ಲಾ ಕಾರಣಗಳಿಂದ ಸರ್ಕಾರ ಜನರಿಗೆ ಎರಡು ದಿನ ಅವಕಾಶ ಮಾಡಿಕೊಟ್ಟಿದೆ. ಆದರೆ ಈ ಎರಡೂ ದಿನಗಳಲ್ಲಿ ದೊಡ್ಡ ಮಟ್ಟದ ವಲಸೆ ಸಾಧ್ಯತೆ ಇದೆ.

ಈಗಾಗಲೇ ಬೆಂಗಳೂರಿಂದ ಹಲವು ಜನ ಬೇರೆ ಜಿಲ್ಲೆಗಳಿಗೆ ಕಾರ್ಯನಿಮಿತ್ತ ಹೋಗಿದ್ದಾರೆ. ಅವರೆಲ್ಲಾ ಮರಳಿ ಬೆಂಗಳೂರಿಗೆ ಬರಲಿದ್ದಾರೆ. ಇತ್ತ ನಗರದಲ್ಲಿ ಇರುವವರು ತಮ್ಮ ತಮ್ಮ ಊರುಗಳಿಗೆ ದೊಡ್ಡ ಪ್ರಮಾಣದಲ್ಲಿ ಸೋಮವಾರ, ಮಂಗಳವಾರ ಹೋಗಲಿದ್ದಾರೆ. ಹೀಗಾಗಿ ಈ ಎರಡೂ ದಿನವೂ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚಾಗಿದೆ. ಈ ಮೂಲಕ ಎರಡು ದಿನ ಸಮಯ ಕೊಟ್ಟು ಸರ್ಕಾರ ಎಡವಟ್ಟು ಮಾಡಿತಾ ಎಂಬ ಪ್ರಶ್ನೆಯೂ ಮೂಡಿದೆ.

Comments

Leave a Reply

Your email address will not be published. Required fields are marked *