ಗಂಡನಿಂದ ಇರಿತಕ್ಕೊಳಗಾದ ಮಹಿಳೆ ನೋವಿನಿಂದ ನರಳುತ್ತಿದ್ರೆ ನೆರೆಹೊರೆಯವರು ವಿಡಿಯೋ ಮಾಡ್ತಿದ್ರು!

 

ಚಂಡೀಗಢ: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನ ಮರ ಕಡಿಯುವ ಸಾಧನದಿಂದ ಇರಿದಿದ್ದು, ಆಕೆ ನೋವಿನಿಂದ ನರಳುತ್ತಿದ್ದರೆ ಅಕ್ಕಪಕ್ಕದ ಮನೆಯವರು ಆಕೆಯ ರಕ್ಷಣೆಗೆ ಬಾರದೆ ವಿಡಿಯೋ ಮಾಡುತ್ತಿದ್ದ ಅಮಾನವೀಯ ಘಟನೆ ಹರಿಯಾಣಾದಲ್ಲಿ ನಡೆದಿದೆ.

ಇಲ್ಲಿನ ಜಿಂದ್ ಜಿಲ್ಲೆಯಲ್ಲಿ ಜೂನ್ 30ರಂದು ಈ ಘಟನೆ ನಡೆದಿದೆ. ಮಹಿಳೆ ನೋವಿನಿಂದ ನರಳಾಡುತ್ತಿದ್ದರೆ ನೆರೆಹೊರೆಯವರು ವಿಡಿಯೋ ಮಾಡಿದ್ದಾರೆ. ಇರಿತಕ್ಕೊಳಗಾದ ಮಹಿಳೆಯನ್ನು ಇಲ್ಲಿನ ಬರೋಲಿ ಗ್ರಾಮದ ನಿವಾಸಿಯಾದ ಸಂಜು ಎಂದು ಗುರುತಿಸಲಾಗಿದೆ. ಸಂಜು ಅನೈತಿಕ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಆಕೆಯ ಗಂಡ ನರೇಶ್ ಮರ ಕಡಿಯುವ ಸಾಧನ(ಆರಿ)ಯಿಂದ ಹೊಟ್ಟೆ, ಭುಜ ಹಾಗೂ ಮಣಕಾಲಿಗೆ ಇರಿದಿದ್ದಾನೆ.

ಅಂದು ನರೇಶ್ ಕುಡಿದು ಮನೆಗೆ ಬಂದಿದ್ದ. ಹೆಂಡತಿಯ ಕಣ್ಣಿಗೆ ಖಾರದ ಪುಡಿ ಎರಚಿ, ಮರ ಕಡಿಯುವ ಸಾಧನದಿಂದ ಪತ್ನಿ ಮೇಲೆ ದಾಳಿ ಮಾಡಿದ್ದಾನೆ. ಪತ್ನಿ ಸಂಜು ನೋವಿನಿಂದ ಕಿರುಚಾಡಿದಾಗ ನೆರೆಹೊರೆಯವರು ಮನೆಯ ಮುಂದೆ ಜಮಾಯಿಸಿದ್ದಾರೆ. ಈ ವೇಳೆ ನರೇಶ್, ಮತ್ತೊಂದು ಅವಕಾಶ ಸಿಕ್ಕರೆ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ .

ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ಸಬ್ ಇನ್ಸ್ ಪೆಕ್ಟರ್ ರಾಮ್ ಮೆಹರ್, ಓರ್ವ ಮಹಿಳೆಗೆ ಇರಿಯಲಾಗಿದೆ ಎಂದು ಕರೆ ಬಂತು. ನಾನು ಕೂಡಲೇ ನನ್ನ ಬೈಕ್‍ನಲ್ಲಿ ಗ್ರಾಮಕ್ಕೆ ತೆರಳಿದೆ. ಮಹಿಳೆ ನೋವಿನಿಂದ ನರಳುತ್ತಿರುವುದನ್ನು ನೋಡಿದೆ. ಈ ವೇಳೆ ನೆರೆಮನೆಯ ವ್ಯಕ್ತಿಯೊಬ್ಬ ವಿಡಿಯೋ ಮಾಡುತ್ತಿದ್ದ. ನಾನು ಆತನಿಗೆ ವಿಡಿಯೋ ಮಾಡುವುದನ್ನು ನಿಲ್ಲಿಸುವಂತೆ ಹೇಳಿದೆ ಎಂದಿದ್ದಾರೆ.

ನಂತರ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸೋನಿಪತ್‍ನ ಖಾನ್ಪುರ್ ಕಲನ್‍ನಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರಗೆ ದಾಖಲಿಸಲಾಗಿದೆ. ಸದ್ಯ ಆಕೆ ಚೇತರಿಸಿಕೊಂಡಿದ್ದು, ಡಿಸ್ಚಾರ್ಚ್ ಮಾಡಲಾಗಿದೆ ಎಂದು ವರದಿಯಾಗಿದೆ.

ಆರೋಪಿ ಪತಿಯನ್ನು ಬಂಧಿಸಲಾಗಿದ್ದು, ಐಪಿಸಿ ಸೆಕ್ಷನ್ 323, 324 ಹಾಗೂ 506ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ ಅಸ್ತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *