ಹೋದಲ್ಲಿ, ಬಂದಲ್ಲಿ ಶುಭಕೋರಿ ಕಟೌಟ್ ಹಾಕಬೇಡಿ: ಸಿಎಂ ಬೊಮ್ಮಾಯಿ

– ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ ನಿಷೇಧ ಬಳಿಕ ಮತ್ತೆ ಸಿಎಂ ಸರಳತೆ

ಉಡುಪಿ: ನಾನು ಹೋದಲ್ಲಿ, ಬಂದಲ್ಲಿ ಕಟೌಟ್ ಹಾಕಬೇಡಿ. ಶುಭಕೋರುವ ಹೋರ್ಡಿಂಗ್ ಯಾರೂ ಹಾಕಬೇಡಿ ಎಂದು ಪಕ್ಷದವರಿಗೆ ಮತ್ತು ಅಭಿಮಾನಿಗಳಿಗೆ ನಾನು ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಾನು ಈ ನಾಡಿನ ಸೇವಕ. ಮುಖ್ಯಮಂತ್ರಿ ಆದರೂ ಈ ನಾಡಿನ ಸೇವಕ. ಈ ಭಾವನೆ ಕಟೌಟ್ ಹೋರ್ಡಿಂಗ್ ನಿಂದ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದೇನೆ. ನಾನು ಯಾವುದೇ ಮ್ಯಾಜಿಕ್ ಮಾಡುತ್ತಿಲ್ಲ. ಪ್ರೀತಿ ಮತ್ತು ವಿಶ್ವಾಸವೇ ನಾನು ಮಾಡುತ್ತಿರುವ ಮ್ಯಾಜಿಕ್. ಅಸಮಾಧಾನ ಎಲ್ಲಾ ತಣ್ಣಗಾಗುತ್ತಿದೆ ಎಂದು ಹೇಳಿದರು.

ಕೋವಿಡ್ ಸಂದರ್ಭ ರಾಜ್ಯದಲ್ಲಿ 1 ಲಕ್ಷ ಸಾವು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲ ಸಾವುಗಳು ಸರ್ಕಾರದ ದಾಖಲೆಯಲ್ಲಿದೆ. ಪ್ರತಿಯೊಂದು ಜಿಲ್ಲೆಯ ಅಂಕಿ ಅಂಶ ಸರ್ಕಾರದ ದಾಖಲೆಯಲ್ಲಿ ಇದೆ. ನಿಮ್ಮ ಹೇಳಿಕೆಗೆ ಆಧಾರ ಕೊಟ್ಟರೆ ಪರಿಶೀಲಿಸುತ್ತೇವೆ. ಸೆಪ್ಟೆಂಬರ್ ತಿಂಗಳಲ್ಲಿ ವಿಧಾನಸಭಾ ಅಧಿವೇಶನ ಕರೆಯುವುದಾಗಿ ಇದೇ ವೇಳೆ ಹೇಳಿದರು.

ಹೂವಿನ ವ್ಯಾಪಾರಿಗಳಿಗೆ ತೊಂದರೆ ಕೊಡಬೇಕು ಎಂಬುದು ನನ್ನ ಉದ್ದೇಶ ಅಲ್ಲ. ಖಾಸಗಿಯಾಗಿ ಅವರು ಹೂವಿನ ವ್ಯಾಪಾರವನ್ನು ಮಾಡಬಹುದು. ಖಾಸಗಿ ಕಾರ್ಯಕ್ರಮದಲ್ಲಿ ಹೂವು, ಹಾರ ತುರಾಯಿ ಬಳಸಬಹುದು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾತ್ರ ಹೂಗುಚ್ಚ, ಹಾರ, ತುರಾಯಿ ಬೇಡ ಎಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರಿ ಜಾಗದಲ್ಲಿ ಗಾರ್ಡ್ ಆಫ್ ಹಾನರ್ ಬೇಡ. ಬೆಂಗಳೂರಿಗೆ ಹೋದ ತಕ್ಷಣ ಆದೇಶವನ್ನು ಹೊರಡಿಸುತ್ತೇನೆ. ಪೊಲೀಸ್ ಸಮಾರಂಭದಲ್ಲಿ ಗೌರವ ವಂದನೆ ಕೊಟ್ಟರೆ ಸಾಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Comments

Leave a Reply

Your email address will not be published. Required fields are marked *