ಹೋಟೆಲ್‍ನಲ್ಲಿ ಅಗ್ನಿ ಅವಘಡ- ಮೃತರ ಕುಟುಂಬಕ್ಕೆ ತಲಾ 50 ಲಕ್ಷ ಪರಿಹಾರ ಘೋಷಣೆ

ಹೈದರಾಬಾದ್: ಕೋವಿಡ್ 19 ರೋಗಿಗಳಿದ್ದ ಹೋಟೆಲ್ ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಆಂಧ್ರ ಸರ್ಕಾರ ತಲಾ 50 ಲಕ್ಷ ಪರಿಹಾರ ಘೋಷಣೆ ಮಾಡಿದೆ.

ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಕೋವಿಡ್ 19 ಸೌಲಭ್ಯವಿದ್ದ ಹೋಟೆಲ್ ನಲ್ಲಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ 7 ಮಂದಿ ಸಜೀವ ದಹನವಾಗಿದ್ದಾರೆ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳ, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

ಈ ಸಂಬಂಧ ಮಾತನಾಡಿದ್ದ, ಕೃಷ್ಣ ಡಿಸಿ ಮೊಹಮ್ಮದ್ ಇಮ್ತಿಯಾಜ್, ಈ ಘಟನೆ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ನಡೆದಿದೆ. ಸುಮಾರು 22 ಮಂದಿ ಕೊರೊನಾ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಕಟ್ಟಡದಲ್ಲಿದ್ದ ಎಲ್ಲರನ್ನೂ ಸ್ಥಳಾಂತರಿಸಿದ್ದೇವೆ. ಶಾರ್ಟ್ ಸರ್ಕ್ಯೂಟ್ ನಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಘಟನೆಗೆ ನಿಖರ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹೋಟೇಲ್ ನಲ್ಲಿದ್ದ ಸುಮಾರು 30 ಮಂದಿಯನ್ನು ರಕ್ಷಿಸಲಾಗಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಪ್ರಧಾನಿಯವರು ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *