ಹೋಂ ಕ್ವಾರಂಟೈನ್‍ನಲ್ಲಿದ್ದ ಸಚಿನ್ ಆಸ್ಪತ್ರೆಗೆ ಶಿಫ್ಟ್

ಮುಂಬೈ: ಕೊರೊನಾ ಸೋಂಕಿಗೆ ತುತ್ತಾಗಿರುವ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡಲ್ಕೂರ್ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಚಿನ್ ಅವರಿಗೆ ಕಳೆದ ವಾರ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಕ್ವಾರಂಟೈನ್‍ಗೆ ಒಳಗಾಗಿದ್ದರು. ಆದರೆ ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ನಿಮಗೆಲ್ಲರಿಗೂ ಧನ್ಯವಾದಗಳು, ನಾನು ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆದಷ್ಟು ಬೇಗ ಮರಳಿ ಮನೆಗೆ ಬರುವ ನಿರೀಕ್ಷೆ ಇದೆ. ದೇಶದ ಜನತೆ ದಯವಿಟ್ಟು ಕೊರೊನಾ ನಿಯಮಗಳನ್ನ ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಅದೇ ರೀತಿ ಇಂದಿಗೆ ವಿಶ್ವಕಪ್ ಗೆದ್ದು 10 ವರ್ಷಗಳು ಸಂದಿದೆ. ಹಾಗಾಗಿ ದೇಶದ ಜನತೆಗೆ ಮತ್ತು ನನ್ನ ತಂಡದ ಸಹ ಆಟಗಾರರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ ಎಂದು ಟ್ವಿಟ್ಟರ್‍ ನಲ್ಲಿ ಬರೆದುಕೊಂಡಿದ್ದಾರೆ.

ಕೊರೊನಾ ದೃಢವಾದ ದಿನದಿಂದ ಸಚಿನ್ ಅವರಿಗೆ, ಅಭಿಷೇಕ್ ಬಚ್ಚನ್ ಸೇರಿದಂತೆ ಅಪಾರ ಸೆಲೆಬ್ರಿಟಿಗಳು ಗುಣಮುಖವಾಗಿ ಬನ್ನಿ ಎಂದು ಹಾರೈಸಿದ್ದಾರೆ. ಅಭಿಮಾನಿಗಳು ಸಹ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ ಸಚಿನ್ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.

ಸಚಿನ್ ಕೆಲದಿನಗಳ ಹಿಂದೆ ತವರಿನಲ್ಲಿ ನಡೆದ ರಸ್ತೆ ಸುರಕ್ಷತಾ ಕ್ರಿಕೆಟ್ ಲೀಗ್‍ನಲ್ಲಿ ಭಾರತ ತಂಡದ ಪರವಾಗಿ ಆಡಿದ್ದರು. ಭಾರತ ಫೈನಲ್‍ನಲ್ಲಿ ಶ್ರೀಲಂಕಾ ತಂಡದ ವಿರುದ್ಧ ಗೆದ್ದು ಪ್ರಶಸ್ತಿ ಜಯಿಸಿತ್ತು.

Comments

Leave a Reply

Your email address will not be published. Required fields are marked *