ಹೊಸ ಕೊರೊನಾ ಹಬ್ಬದಂತೆ ಮುಂಜಾಗ್ರತಾ ಕ್ರಮ: ಸುಧಾಕರ್

– ಲಾಕ್‍ಡೌನ್, ಸೀಲ್‍ಡೌನ್ ಅವಶ್ಯಕತೆ ಇಲ್ಲ

ಬೆಂಗಳೂರು: ಬ್ರಿಟನ್ ಹೆಮ್ಮಾರಿ ಇದೀಗ ರಾಜ್ಯಕ್ಕೂ ವಕ್ಕರಿಸಿದೆ. ಬೆಂಗಳೂರಲ್ಲಿ ಮೂರು ಕೇಸ್ ಸಹಿತ ದೇಶದಲ್ಲಿ 6 ಮಂದಿಯಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ. ಈ ಹೊಸ ಕೊರೊನಾ ಹಬ್ಬದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಚಿವರು, ಕೊರೊನಾ ವೈರಾಣುವಿನ ರೂಪಾಂತರಗೊಂಡ ಪ್ರಬೇಧವನ್ನು ಪತ್ತೆ ಮಾಡಲು ಯುಕೆನಿಂದ ರಾಜ್ಯಕ್ಕೆ ಮರಳಿದ್ದ ವ್ಯಕ್ತಿಗಳನ್ನು ನಿಮ್ಹಾನ್ಸ್ ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ ಮೂವರಲ್ಲಿ ಹೊಸ ಪ್ರಬೇಧದ ಸೋಂಕು ದೃಢಪಟ್ಟಿದ್ದು. ಹೊಸ ಪ್ರಬೇಧದ ವೈರಸ್ ಹರಡದಂತೆ ತಡೆಯಲು ತಜ್ಞರೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬರೆದುಕೊಂಡಿದ್ದಾರೆ.

ರಾಜ್ಯದಲ್ಲೂ ಬ್ರಿಟನ್ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಇಂದು ವಿಧಾನಸೌಧದಲ್ಲಿ ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. ಹೊಸ ವರ್ಷಾಚರಣೆಗೆ ಬಿಗಿ ಮಾರ್ಗಸೂಚಿಗಳ ಬಗ್ಗೆ ಹಾಗೂ ಉಳಿದ ಬ್ರಿಟನ್ ವಾಪಸಿಗರ ಆರೋಗ್ಯ ಮೇಲೆ ನಿಗಾ ವಹಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ.

ಬೆಂಗಳೂರಿನಲ್ಲಿ ಮೂವರಲ್ಲಿ ಬ್ರಿಟನ್ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರನ್ನು ಗುರುತಿಸಿದ್ದೇವೆ. ತಾಯಿ ಹಾಗೂ 1 ವರ್ಷದ ಮಗುವಿನಲ್ಲಿ ಬ್ರಿಟನ್ ವೈರಸ್ ಪತ್ತೆಯಾಗಿದೆ. ನಮ್ಮಲ್ಲಿ ಬ್ರಿಟನ್ ಕೊರೊನಾ ಪ್ರಮಾಣ ಕಡಿಮೆ ಇದೆ. ಹೀಗಾಗಿ ಲಾಕ್‍ಡೌನ್, ಸೀಲ್ ಡೌನ್ ಮಾಡುವ ಅವಶ್ಯಕತೆ ಇಲ್ಲ. ಸದ್ಯಕ್ಕೆ ಯಾವುದೇ ಕಠಿಣ ನಿಯಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *