ಹೊಸದಾಗಿ ಉಗ್ರ ಸಂಘಟನೆ ಸೇರಿದ್ದ ಮೂವರು ಭಯೋತ್ಪಾದಕರು ಅರೆಸ್ಟ್

ಶ್ರೀನಗರ: ಹೊಸದಾಗಿ ಉಗ್ರ ಸಂಘಟನೆಗೆ ಸೇರಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಬಂಧಿಸಿದೆ ಎಂದು ಜಮ್ಮು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತ ಮೂವರಲ್ಲಿ ಇಬ್ಬರನ್ನು ಝಾಕಿರ್ ಅಹ್ಮದ್ ಭಟ್ ಮತ್ತು ಅಬಿದ್ ಹುಸೇನ್ ವಾನಿ ಎಂದು ಗುರುತಿಸಲಾಗಿದೆ. ಇನ್ನೊಬ್ಬನ ಗುರುತು ಪತ್ತೆಯಾಗಿಲ್ಲ. ಕಾಶ್ಮೀರಾದ ಪೊಲೀಸರು ಮತ್ತು ಭಾರತೀಯ ಸೇನೆ ಜಂಟಿಯಾಗಿ ಈ ಕಾರ್ಯಾಚರಣೆ ಮಾಡಿದೆ. ಈ ಮೂವರು ಭಯೋತ್ಪಾದಕರು ಇತ್ತೀಚೆಗೆ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಭಯೋತ್ಪಾದಕ ಗುಂಪಿಗೆ ಸೇರಿದ್ದರು ಎಂಬ ಮಾಹಿತಿ ಲಭಿಸಿದೆ.

ಪುಲ್ವಾಮ ಜಿಲ್ಲೆಯಲ್ಲಿ ಜಮ್ಮ ಕಾಶ್ಮೀರ ಪೊಲೀಸರು ಲಷ್ಕರ್-ಎ-ತೈಬಾ ಉಗ್ರ ಸಂಘಟನೆಗೆ ಸೇರಿದ್ದ ಉಗ್ರ ಘಟಕವೊಂದನ್ನು ನಾಶ ಮಾಡಿದ್ದರು. ಜಮ್ಮು ಕಾಶ್ಮೀರಾದ ಅವಂತಿಪೋರಾ ವಿಭಾಗದ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ಮಾಡಲಾಗಿತ್ತು. ಇದಾದ ನಂತರ ಈ ಮೂವರು ಉಗ್ರರನ್ನು ಸೆರೆಹಿಡಿಯಲಾಗಿದೆ. ಈ ಮೂವರು ಉಗ್ರರು ಪಾಕಿಸ್ತಾನಕ್ಕೆ ಸೇರಿದ್ದವರಾಗಿದ್ದು, ಉನ್ನತ ಮಟ್ಟದ ಟ್ರೈನಿಂಗ್ ಪಡೆಯಲು ಉಗ್ರ ಸಂಘಟನೆ ಸೇರಿದ್ದರು ಎನ್ನಲಾಗಿದೆ.

ಜಮ್ಮು ಕಾಶ್ಮೀರಾದ ಬಾಥೆನ್ ಪ್ರದೇಶದಲ್ಲಿ ನಾವು ಮತ್ತು ಭಾರತೀಯ ಸೇನೆ ದಾಳಿ ಮಾಡಿ ಸ್ಫೋಟಕ ಮತ್ತು ಮದ್ದುಗುಂಡುಗಳನ್ನು ಒಳಗೊಂಡಂತೆ ಕೃತ್ಯಕ್ಕೆ ಬಳಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ. ಬಂಧಿತ ಮೂವರು ಉಗ್ರರ ವಿರುದ್ಧ ಕಾನೂನಿನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಕಳೆದ ಮಂಗಳವಾರ ಶ್ರೀನಗರದ ಪಾಂಡಚ್ ಪ್ರದೇಶದಲ್ಲಿ ಬಿಎಸ್‍ಎಫ್ ಯೋಧರ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಇಬ್ಬರು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಸಿಬ್ಬಂದಿ ಹುತಾತ್ಮರಾಗಿದ್ದರು. ಈ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಸೈನಿಕರು ತೀವ್ರವಾಗಿ ಗಾಯಗೊಂಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *