ಹೊಗೇನಕಲ್ ಜಲವೈಭವ ಡ್ರೋನ್ ಕ್ಯಾಮೆರಾದಲ್ಲಿ ಸೆರೆ

– ಜಮೀನುಗಳಿಗೆ ಕಾವೇರಿ ನೀರು ನುಗ್ಗಿ ಹಾನಿ

ಚಾಮರಾಜನಗರ: ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಗಳಿಂದ ಒಂದೂವರೆ ಲಕ್ಷ ಕ್ಯೂಸೆಕ್‍ಗೂ ಹೆಚ್ಚು ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿ ಹೊಗೇನಕಲ್‍ನಲ್ಲಿ ಜಲವೈಭವವೇ ಸೃಷ್ಟಿಯಾಗಿದೆ. ಈ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ವಿಶಾಲವಾಗಿ ಹರಿಯುತ್ತಾ ಹೊಗೇನಕಲ್ ಬಳಿ ಭೋರ್ಗೆರೆದು ಹಾಲ್ನೊರೆಯಂತೆ ಧುಮ್ಮಿಕ್ಕುವ ದೃಶ್ಯ ವರ್ಣನಾತೀತವಾಗಿದೆ. ಕೊಡಗಿನಲ್ಲಿ ಹುಟ್ಟಿ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹರಿದು ಹೊಗೇನಕಲ್ ಬಳಿ ತಮಿಳುನಾಡಿಗೆ ಪ್ರವೇಶಿಸುವ ಕಾವೇರಿಯ ಸೊಬಗು ಈಗ ಇಮ್ಮಡಿಗೊಂಡಿದೆ. ಮಲೆಮಹದೇಶ್ವರ ಬೆಟ್ಟ ಅರಣ್ಯದಲ್ಲಿನ ಬೆಟ್ಟಗುಡ್ಡಗಳ ನಡುವೆ ಬಂಡೆಗಳನ್ನು ಸೀಳಿ ಹಾಲ್ನೊರೆಯಂತೆ ಧುಮ್ಮಿಕ್ಕುವ ದೃಶ್ಯವಂತೂ ರುದ್ರರಮಣೀಯವಾಗಿದೆ.

ಇತ್ತ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಗೀಡಾಗಿದೆ. ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರ, ಮುಳ್ಳೂರು, ಹಳೇ ಅಣಗಳ್ಳಿ, ದಾಸನಪುರ ಗ್ರಾಮಗಳಲ್ಲಿ ಕಬ್ಬು ಭತ್ತ, ಬಾಳೆ ಬೆಳೆ ಸೇರಿದಂತೆ ನೂರಾರು ಎಕರೆ ಬೆಳೆ ಹಾನಿಗೀಡಾಗಿದೆ.

ಭತ್ತದ ಸಸಿ ಸಂಪೂರ್ಣ ನಾಶವಾಗಿವೆ, ಹತ್ತಾರು ಪಂಪ್ ಸೆಟ್‍ಗಳು ಜಲಾವೃತಗೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಸರ್ಕಾರ ಕಳೆದ ವರ್ಷದ ಬೆಳೆ ಹಾನಿ ಪರಿಹಾರವನ್ನೇ ಸರಿಯಾಗಿ ನೀಡಿಲ್ಲ. ಈ ವರ್ಷ ಪ್ರವಾಹದಿಂದ ನಮ್ಮ ಬೆಳೆ ಹಾನಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *