ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪ್ರಯೋಗಕ್ಕೆ ತಾತ್ಕಾಲಿಕ ಸ್ಥಗಿತ

ಜಿನಿವಾ: ಕೊರೊನಾ ಜ್ವರಕ್ಕೆ ತಕ್ಷಣದ ಔಷಧಿ ಎಂದೇ ಪರಿಗಣಿಸಲಾಗಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯ ಮೇಲಿನ ಪ್ರಯೋಗಾರ್ಥ ಪರೀಕ್ಷೆಯನ್ನು ವಿಶ್ವ ಆರೋಗ್ಯ ಸಂಸ್ಥೆ ತಾತ್ಕಾಲಿಕವಾಗಿ ಕೈಬಿಟ್ಟಿದೆ.

ವೈದ್ಯಕೀಯ ಅಧ್ಯಯನಕ್ಕಾಗಿರುವ ಜಗತ್ತಿನ ಅತೀ ಶ್ರೇಷ್ಠ ನಿಯತಕಾಲಿಕೆ ಲ್ಯಾಸೆಟ್ ‘ಕೊರೊನಾ ಪೀಡಿತ ರೋಗಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ನೀಡಿದ್ರೆ ಸಾಯುವ ಸಾಧ್ಯತೆ ಹೆಚ್ಚಿದೆ’ ಎಂದು ಅಧ್ಯಯನ ವರದಿ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ರೋಗಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಬಳಸುವ ಸಂಬಂಧ ಆರಂಭಿಸಿದ್ದ ಪ್ರಯೋಗಾರ್ಥ ಪರೀಕ್ಷೆಯನ್ನೇ ನಿಲ್ಲಿಸಿದೆ.

ವರದಿ ಪ್ರಕಾರ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ಅಡ್ಡಪರಿಣಾಮಗಳು ಹೆಚ್ಚಿದ್ದು, ಹೃದಯಾಘಾತದ ಆತಂಕ ವ್ಯಕ್ತಪಡಿಸಿತ್ತು. ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಅಮೆರಿಕ ಸೇರಿದಂತೆ ಸ್ಪೇನ್, ಜರ್ಮನಿ, ಬಹರೇನ್, ಬ್ರೆಜಿಲ್, ನೇಪಾಳ, ಭೂತಾನ್, ಅಫ್ಘಾನಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್, ಬಾಂಗ್ಲಾದೇಶ, ಸೀಶೆಲ್ಸ್, ಮಾರಿಷಸ್ ಮತ್ತು ಡೊಮಿನಿಕನ್ ರಿಪಬ್ಲಿಕ್ ದೇಶಗಳಿಗೆ ಮಾತ್ರೆಯನ್ನು ಭಾರತ ರಫ್ತು ಮಾಡಿತ್ತು.

ಈ ಹಿಂದೆ ಅಧ್ಯಯನ ಹೇಳಿದ್ದು ಏನು?
ಕೊರೊನಾ ತೀವ್ರವಾಗಿ ಹರಡುತ್ತಿರುವ ಯುರೋಪ್, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 30 ದೇಶಗಳ ಒಟ್ಟು 6,227 ಮಂದಿ ವೈದ್ಯರನ್ನು ಸಂಪರ್ಕಿಸಿ ಅಧ್ಯಯನ ನಡೆಸಲಾಗಿತ್ತು. ಈ ಪೈಕಿ ಶೇ.37ರಷ್ಟು ಮಂದಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ಪಟ್ಟಿದ್ದರು.

ಕೊರೊನಾ ತಡೆಗಟ್ಟಲು ನೀಡಲಾಗುವ ಔಷಧಿಗಳ ಪೈಕಿ ಶೇ.56 ನೋವು ನಿವಾರಕಗಳು, ಶೇ.41 ಅಜಿಥ್ರೊಮೈಸಿನ್, ಶೇ.33 ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗುತ್ತಿದೆ. ಈ ಪೈಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಉತ್ತಮ ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿತ್ತು.

Comments

Leave a Reply

Your email address will not be published. Required fields are marked *