ಕಾರವಾರ: ಇನ್ನು ಹೆಸರಿಡದ ಪುಟ್ಟು ಮಗು ಸೇರಿ ತಾಯಿ, ಮಗಳ ಮೃತ ದೇಹಗಳು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗಣೇಶ್ ಪಾಲ್ ಹೊಳೆಯಲ್ಲಿ ಇಂದು ಪತ್ತೆಯಾಗಿವೆ.

ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಲಗೋಡ್ಲುವಿನಲ್ಲಿ ಶುಕ್ರವಾರ ಮನೆಯಿಂದ ಕಾಣೆಯಾಗಿದ್ದ ತಾಯಿ, ಮಗಳು ಹಾಗೂ ಮೊಮ್ಮಗನ ಮೃತದೇಹಗಳು ಪತ್ತೆಯಾಗಿದ್ದು, ಮೃತರನ್ನು ರಾಜೇಶ್ವರಿ ನಾರಾಯಣ ಹೆಗಡೆ(52), ವಾಣಿ ಪ್ರಕಾಶ್.ವೈ (28) ಹಾಗೂ ವಾಣಿಯವರ ಇನ್ನೂ ಹೆಸರಿಡದ 11 ತಿಂಗಳ ಗಂಡು ಮಗು ಎಂದು ಗುರುತಿಸಲಾಗಿದೆ.
ಈ ಮೂವರೂ ನ.20ರಂದು ಮನೆಯಿಂದ ಕಾಣೆಯಾಗಿದ್ದರು. ಹಲವೆಡೆ ಹುಡುಕಾಡಿದ ಮನೆಯವರು ಇಂದು ದೂರು ನೀಡಲು ಯಲ್ಲಾಪುರ ಪೊಲೀಸ್ ಠಾಣೆಗೆ ಬಂದಿದ್ದರು. ಅದೇ ಸಮಯಕ್ಕೆ ಗಣೇಶ್ ಪಾಲ್ ಹೊಳೆಯಲ್ಲಿ ಮೃತದೇಹಗಳು ಸಿಕ್ಕಿರುವ ಮಾಹಿತಿ ಲಭಿಸಿದೆ. ಈ ವೇಳೆ ಶವವನ್ನು ಕುಟುಂಬದವರು ನೋಡಿ ಗುರುತಿಸಿದ್ದಾರೆ.

ಹೆಸರಿಡುವ ಮುಂಚೆ ಮಗು ಸಾವು
ವಾಣಿಯವರ ಗಂಡನ ಮನೆ ಶಿವಮೊಗ್ಗದಲ್ಲಿದೆ. ಅವರ ಮಗುವಿಗೆ ನಾಮಕರಣ ಕಾರ್ಯಕ್ರಮವನ್ನು ಇಂದು(ಭಾನುವಾರ)ನಿಗದಿ ಮಾಡಲಾಗಿತ್ತು. ಆದರೆ ಹೆಸರಿಡುವ ಮೊದಲೇ ಮಗುವಿನ ಉಸಿರು ನಿಂತುಹೋಗಿದೆ. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆತ್ಮಹತ್ಯೆಯೋ, ಕೊಲೆಯೋ ಎಂಬ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Leave a Reply