ಹೆತ್ತವಳ ಋಣ ತೀರಿಸಲು ಬಿಡದ ಕ್ರೂರಿ ಕೊರೊನಾ

– ತಾಯಿ ಸಾವು, ಮಗ ಆಸ್ಪತ್ರೆ

ಚಿಕ್ಕಮಗಳೂರು: ಹೆತ್ತು-ಹೊತ್ತು ಸಾಕಿ-ಸಲಹಿ ಬದುಕಿನ ದಾರಿ ತೋರಿದ್ದ ಹೆತ್ತವಳ ಅಂತ್ಯಸಂಸ್ಕಾರ ಮಾಡೋದಕ್ಕೂ ಬಿಡದಂತೆ ಕ್ರೂರಿ ಕೊರೊನಾ ಜವಾಬ್ದಾರಿ-ಮಾನವೀಯತೆಯ ಮೇಲೂ ಸವಾರಿ ಮಾಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರದ ಡಣಾಯಕಪುರದಲ್ಲಿ ನಡೆದಿದೆ.

ಕೊರೊನಾದಿಂದ ಮೃತಪಟ್ಟ ಹೆತ್ತ ತಾಯಿ ಮಸಣದ ಚಿತೆ ಮೇಲಿದ್ದರೆ, ಋಣ ತೀರಿಸಬೇಕಾದ ಮಗ ಆಸ್ಪತ್ರೆಯ ಬೆಡ್ ಮೇಲೆ ಮತ್ತದೇ ಕೊರೊನಾದಿಂದ ಬಳಲುತ್ತಿದ್ದ. ಒಂದೆಡೆ ಈ ನೋವಾದರೆ ಮತ್ತೊಂದೆಡೆ ಮೃತಪಟ್ಟ ವೃದ್ಧೆಯಿಂದ ಕೊರೊನಾ ನಿಲ್ಲುತ್ತೋ ಅಥವಾ ಮುಂದುವರೆಯುತ್ತೋ ಅನ್ನೋ ಆತಂಕ ಕೂಡ ಸ್ಥಳೀಯರಲ್ಲಿ ಮನೆ ಮಾಡಿದೆ.

ಯಾಕಂದರೆ ಗುರುವಾರ ನಗರದ ಕೋವಿಡ್ ಆಸ್ವತ್ರೆಯಲ್ಲಿ 72 ವರ್ಷದ ವೃದ್ದೆ ಸಾವನ್ನಪ್ಪಿದ ಪ್ರಕರಣ ಸಂಬಂಧ ವೃದ್ಧೆಯ 52 ವರ್ಷದ ಮಗನಿಗೂ ಕೊರೊನಾ ಪಾಸಿಟಿವ್ ದೃಢ ಪಟ್ಟಿದೆ. ಈಗ ವೃದ್ಧೆಯ ಟ್ರಾವೆಲ್ ಹಿಸ್ಟರಿ ಜಿಲ್ಲೆಯಲ್ಲಿ ಆತಂಕ ಹುಟ್ಟಿಸುತ್ತಿದ್ದು, ಬೀರೂರು, ಅಜ್ಜಂಪುರ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಮೃತರಿಗೆ ಕೊರೊನಾ ಸೋಂಕು ತಗುಲಿತ್ತು ಎಂದು ಹೇಳಲಾಗುತ್ತಿದೆ.

ಚನ್ನಗಿರಿಯ ಕುಂಬಾರ ಬೀದಿಯಲ್ಲಿ ಮೃತ ವೃದ್ಧೆಯ ಮಗಳ ಮನೆಯಿದ್ದು, ವೃದ್ಧೆಯೂ ಮಗಳ ಮನೆಗೆ ತೆರಳಿದ್ದರು. ಅವರ ಎದುರು ಮನೆಯ 52 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿ ಶಿವಮೊಗ್ಗದಲ್ಲಿ ಮೃತರಾಗಿದ್ದರು. ವೃದ್ಧೆಯಿಂದ ಕುಂಬಾರು ಬೀದಿಯನ್ನು ಸೀಲ್‍ಡೌನ್ ಮಾಡಲಾಗಿತ್ತು. ಚನ್ನಗಿರಿಯಲ್ಲಿ ವೃದ್ಧೆಗೆ ಆರೋಗ್ಯ ಸಮಸ್ಯೆ ಕಾಡಿದ್ದು ಚನ್ನಗಿರಿಯ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲಿ ಹುಷಾರಾಗದ ಕಾರಣ ಬೀರೂರಿಗೆ ಬಂದು ಸೋಮವಾರ ಪರಿಚಯವಿದ್ದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ನಂತರದಲ್ಲಿ ಮಂಗಳವಾರ ಅಜ್ಜಂಪುರದ ಖಾಸಗಿ ಹಾಗೂ ಸರ್ಕಾರಿ ಆಸ್ವತ್ರೆಯಲ್ಲಿ ವೃದ್ಧೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಮಂಗಳವಾರ ಶಿವಮೊಗ್ಗದಲ್ಲಿ ಮಗಳ ಮನೆಯ ಎದುರಿನ ಮಹಿಳೆಯ ಸಾವಿವ ಸುದ್ದಿ ತಿಳಿಯುತ್ತಿದ್ದಂತೆ ವೃದ್ಧೆಯನ್ನು ತರೀಕೆರೆಗೆ ಕಳುಹಿಸಿ ಗಂಟಲು ದ್ರವವನ್ನು ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಬುಧವಾರ ಸಂಜೆ ಸುಮಾರಿಗೆ ಚಿಕ್ಕಮಗಳೂರು ಕೊವೀಡ್ ಆಸ್ವತ್ರೆಗೆ ವೃದ್ಧೆಯನ್ನು ದಾಖಲು ಮಾಡಲಾಯಿತು. ಗುರುವಾರ ಸಂಜೆ ವೇಳೆಗೆ ಮೃತ ವೃದ್ಧೆಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ.

ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ಮೃತರಾಗಿದ್ದಾರೆ. ಅಜ್ಜಂಪುರ, ಬೀರೂರಿನ ಖಾಸಗಿ ಆಸ್ವತ್ರೆ ಮಾತ್ರವಲ್ಲದೇ ಸರ್ಕಾರಿ ಆಸ್ವತ್ರೆಯಲ್ಲಿಯೂ ಚಿಕಿತ್ಸೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಮೃತ ವೃದ್ಧೆಗೆ ಒಟ್ಟು ಆರು ವೈದ್ಯರು ಹಾಗೂ ದಾದಿಯರು ಚಿಕಿತ್ಸೆ ನೀಡಿದ್ದರು. ಇವರಿಗೆ ಕೊರೊನಾ ಕಂಟಕ ಎದುರಾಗುವ ಸಾಧ್ಯತೆಯೂ ಇದೆ. ವೃದ್ಧೆಯ ಸಂಪರ್ಕದಲ್ಲಿದ್ದ 30ಕ್ಕೂ ಹೆಚ್ಚು ಜನರನ್ನು ಜಿಲ್ಲಾಡಳಿತ ಕೋವಿಡ್ ಪರೀಕ್ಷೆ ಮಾಡಿದ್ದು, ಕ್ವಾರಂಟೈನ್‍ಗೆ ಸೂಚಿಸಿದೆ.

ವೃದ್ಧೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ದಾದಿಯರು ಹಾಗೂ ವೈದ್ಯರಿಂದ ಹೊರ ರೋಗಿಗಳಿಗೂ ಸೋಂಕು ಹರಡು ಸಾಧ್ಯತೆ ಇದೆ ಎಂದು ಸಾರ್ವಜನಿಕರು ಭಯಭೀತರಾಗಿದ್ದಾರೆ. ವೃದ್ಧೆಯ ಸಾವಿನ ವಿಷಯ ತಿಳಿಯುತ್ತಿದ್ದಂತೆ, ಡಣಯಕಾಪುರ ಗ್ರಾಮದಲ್ಲೂ ಹಲವರು ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ. ಮನೆಯಿಂದ ಹೊರ ಬರಲು ಗ್ರಾಮಸ್ಥರು ಹೆದರುತ್ತಿದ್ದಾರೆ. ಗುರುವಾರ ತಡರಾತ್ರಿ ವೃದ್ಧೆಯ ಜಮೀನಿನಲ್ಲಿ ಜಿಲ್ಲಾಡಳಿತ ಸೀಮಿತ ಅಧಿಕಾರಿಗಳ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದೆ.

Comments

Leave a Reply

Your email address will not be published. Required fields are marked *