– ಕ್ರಿಮಿನಲ್ಸ್ ಗಳನ್ನ ಬೆಳೆಸಿದ್ದಕ್ಕೆ ಎಸ್.ಎಂ.ಕೃಷ್ಣ ಕ್ಷಮೆ ಕೇಳಲಿ
– ಕಾಫಿ ಡೇ ಹಗರಣ ವರದಿಯಲ್ಲಿ ಪ್ರಮುಖ ಭ್ರಷ್ಟರ ಉಲ್ಲೇಖವಿಲ್ಲ
ರಾಯಚೂರು: ಒಂದು ತಿಂಗಳಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಭೂಹಗರಣ ಸಂಪೂರ್ಣ ಬಿಚ್ಚಿಡುತ್ತೇವೆ ಅಂತ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಎಸ್.ಆರ್.ಹಿರೇಮಠ, ರಾಮನಗರದ ಕೇತಗಾನಹಳ್ಳಿ ಪರಿಶಿಷ್ಟ ಜಾತಿಗೆ ಸೇರಿದ 200 ಎಕರೆ, 65 ಎಕರೆ ಗೋಮಾಳ ಕಬಳಿಕೆ ಬಗ್ಗೆ ಶೀಘ್ರದಲ್ಲೇ ಹಗರಣವನ್ನ ತಾತ್ವಿಕ ಹಂತಕ್ಕೆ ಒಯ್ಯುತ್ತೇವೆ. ಪ್ರಕರಣ ಲೋಕಾಯುಕ್ತ ಮೆಟ್ಟಿಲು ಏರಿದ್ದರೂ, ಹೈಕೋರ್ಟ್ ಸೂಚಿಸಿದ್ದರು ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದರು.

ಇನ್ನೂ ಕಾಫಿ ಡೇ ಹಗರಣ ಕುರಿತು ಸಿಬಿಐ ನಿವೃತ್ತ ಡಿಐಜಿ ಅಶೋಕ್ ಮಲ್ಹೋತ್ರ ವರದಿ ನೀಡಿದ್ದಾರೆ. ಆದರೆ ವರದಿಯಲ್ಲಿ ಅನೇಕ ಭ್ರಷ್ಟರ, ಭ್ರಷ್ಟತನದ ಉಲ್ಲೇಖವಿಲ್ಲ. ಡಿಕೆಶಿ, ಮಾಳವಿಕ ಹೆಗಡೆ ಸೇರಿ ಅನೇಕರು ಸಾರ್ವಜನಿಕ ಹಣ ಲೂಟಿ ಮಾಡಿದ್ದಾರೆ. ಹಗರಣದ ಬಗ್ಗೆ ಗಂಭೀರವಾದ ತನಿಖೆ ನಡೆದಿಲ್ಲ ಅಂತ ಆರೋಪಿಸಿದರು. ನಿವೃತ್ತ ರಾಜ್ಯ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಕಾಫಿ ಡೇ ಛೇರ್ಮನ್ ಆಗಿದ್ದಾರೆ. ರಂಗನಾಥ್ ಎಷ್ಟು ಪ್ರಮಾಣಿಕರೋ ಗೊತ್ತಿಲ್ಲ, ತನಿಖೆ ಸರಿಯಾಗಿ ನಡೆಯುವಂತೆ ಮಾಡುವುದು ಅವರ ಕರ್ತವ್ಯ ಎಂದರು.

ಮಾಜಿ ಸಿಎಂ ಎಸ್.ಎಂ.ಕೃಷ್ಣ ಕ್ರಿಮಿನಲ್ಸ್ ಗಳನ್ನ ಬೆಳೆಸಿದ್ದಕ್ಕೆ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಕೃಷ್ಣ ತಮ್ಮ ಅಪರಾಧಗಳನ್ನ ಮುಚ್ಚಿಕೊಳ್ಳಲು ಬಿಜೆಪಿ ಸೇರಿದ್ದಾರಾ ಹೇಳಬೇಕು. ಹೊರಗೆ ಬಂದು ಏನೆಲ್ಲಾ ಭ್ರಷ್ಟಾಚಾರ ನಡೆದಿದೆ ಅನ್ನೋದನ್ನ ಎಸ್.ಎಂ.ಕೃಷ್ಣ ಸ್ವತಃ ಹೇಳಬೇಕು ಅಂತ ಒತ್ತಾಯಿಸಿದರು. ಎಸ್.ಎಂ.ಕೃಷ್ಣ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಅಕ್ರಮ ಹಣದಿಂದ ಕಾಫಿ ಡೇ ಎಂಟರ್ ಪ್ರೈಸಸ್ ಮಾಡಿದ್ದಾರೆ. ಎಸ್ ಎಂ ಕೃಷ್ಣರ ಅಳಿಯ ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನವಿದೆ. ಕ್ರಿಮಿನಲ್ಸ್ ಗಳನ್ನು ಬೆಳೆಸಿದ್ದಕ್ಕೆ ಎಸ್.ಎಂ.ಕೃಷ್ಣ ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ದೆಹಲಿಯಲ್ಲಿ ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಸರ್ಕಾರ ದುಡಿಯುವ ಜನರ ಪರವಾಗಿ ಕೆಲಸ ಮಾಡಬೇಕು. ಶ್ರೀಮಂತರ ಪರವಾಗಿ ಕಾನೂನು ಮಾಡುವುದನ್ನು ಬಿಡಬೇಕು. ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಮೂರು ಜನವಿರೋಧಿ ಕಾಯ್ದೆಗಳನ್ನ ಹಿಂಪಡೆಯಬೇಕು ಅಂತ ಎಸ್.ಆರ್.ಹಿರೇಮಠ ಒತ್ತಾಯಿಸಿದರು.

Leave a Reply