ಹೃತಿಕ್ ರೋಷನ್ ನಟನೆಯ ವೆಬ್ ಸರಣಿಯಲ್ಲಿ ಕನ್ನಡದ ನಟಿ?

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ನಭಾ ನಟೇಶ್ ಬಾಲಿವುಡ್ ನಟ ಹೃತಿಕ್ ರೋಷನ್ ನಟನೆಯ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಹೃತಿಕ್‍ಗೆ ಜೋಡಿಯಾಗಿ ನಭಾ ನಟೇಶ್ ಕಾಣಿಸಿಕೊಳ್ಳಲಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಈ ಗಾಸಿಪ್ ಸತ್ಯ ಆದರೆ ನಭಾ ದೊಡ್ಡಮಟ್ಟದಲ್ಲಿ ಬಾಲಿವುಡ್‍ಗೆ ಎಂಟ್ರಿ ನೀಡಲಿದ್ದಾರೆ. ನಟ ಸುಧೀರ್ ಬಾಬು ಜೊತೆ ನನ್ನು ದೋಚುಕುಂಡುವಟೆ ಸಿನಿಮಾ ಮೂಲಕ ಟಾಲಿವುಡ್‍ಗೆ ಕಾಲಿಟ್ಟಿದ್ದ ನಭಾ ಸದ್ಯ ತೆಲುಗು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರೀಗ ಯಾವುದೇ ಕನ್ನಡ ಪ್ರಾಜೆಕ್ಟ್‍ನ್ನು ಒಪ್ಪಿಕೊಂಡಿಲ್ಲ. ಆದರೆ ಇದೀಗ ಬಾಲಿವುಡ್‍ನಲ್ಲಿ ಮಿಂಚಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಬಾಲಿವುಡ್ ನಟ ಸೈಫ್ ಅಲಿ ಖಾನ್, ಅಭಿಷೇಕ್ ಬಚ್ಚನ್, ಅಕ್ಷಯ್ ಕುಮಾರ್ ಅವರು ವೆಬ್ ಸಿರೀಸ್ ಲೋಕಕ್ಕೆ ಈಗಾಗಲೇ ಕಾಲಿಟ್ಟಿದ್ದಾರೆ. ನಟ ಹೃತಿಕ್ ರೋಷನ್ ಅವರು ವೆಬ್ ಸಿರೀಸ್ ಮಾಡುತ್ತಿದ್ದಾರೆ ಶೀಘ್ರದಲ್ಲಿಯೇ ಅವರು ವೆಬ್ ಸಿರೀಸ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾನ್ ಲೆ ಕ್ಯಾರಿ ಅವರ ‘ದಿ ನೈಟ್ ಮ್ಯಾನೇಜರ್’ ವೆಬ್ ಸಿರೀಸ್‍ನ ಹಿಂದಿ ರಿಮೇಕ್‍ನಲ್ಲಿ ಹೃತಿಕ್ ಬಣ್ಣ ಹಚ್ಚಲಿದ್ದಾರೆ.

 

ಎ. ಹರ್ಷ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವಜ್ರಕಾಯ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟವರು ನಟಿ ನಭಾ ನಟೇಶ್. ಪಟಾಕಾ ಪಾರ್ವತಿ ಪಾತ್ರದಲ್ಲಿ ಬಿಂದಾಸ್ ಆಗಿ ನಟಿಸಿ ತಮ್ಮ ಮೊದಲ ಚಿತ್ರದಲ್ಲೇ ಕಮಾಲ್ ಮಾಡಿ ಕನ್ನಡಿಗರ ಮನದಲ್ಲಿ ಜಾಗ ಗಿಟ್ಟಿಸಕೊಂಡಿದ್ದರು. ವಜ್ರಕಾಯ ಚಿತ್ರದ ಗೆಲುವಿನ ನಂತರ ಸಾಹೇಬದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. `ನನ್ನು ದೋಚುಕುಂಡುವಟೆ ಚಿತ್ರದ ಮೂಲಕ ತೆಲುಗು ಚಿತ್ರಜಗತ್ತಿಗೆ ಎಂಟ್ರಿ ಕೊಟ್ಟಿದ್ದ ನಭಾ ಅಧುಗೋ, ಇಸ್ಮಾರ್ಟ್ ಶಂಕರ್, ಡಿಸ್ಕೋ ರಾಜ, ಅಲ್ಲುಡು ಅಧುರ್ಸ್ ಸೇರಿದಂತೆ ಒಂದರ ಹಿಂದೊಂದು ತೆಲುಗು ಚಿತ್ರಗಳಲ್ಲಿ ನಟಿಸುತ್ತಲೇ ಇದ್ದಾರೆ.

 

View this post on Instagram

 

A post shared by Nabha Natesh (@nabhanatesh)

ಪೂಜಾ ಹೆಗಡೆ, ರಕುಲ್ ಪ್ರೀತ್ ಸಿಂಗ್, ಪ್ರಗ್ಯಾ ಜೈಸ್ವಾಲ್, ಶಾಲಿನಿ ಪಾಂಡೆ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಸೇರಿದಂತೆ ಸಾಕಷ್ಟು ಜನ ನಟಿಯರು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿ, ನಂತರ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. ನಭಾ ನಟೇಶ್ ಕೂಡಾ ಕನ್ನಡದಿಂದ ತೆಲುಗಿಗೆ ಹೋಗಿ, ಈಗ ಅಲ್ಲಿಂದ ಹಿಂದಿ ಚಿತ್ರರಂಗಕ್ಕೆ ಅಡಿಯಿರಿಸುತ್ತಿದ್ದಾರೆ. ಅಂದ, ಚೆಂದದ ಜೊತೆಗೆ ಅಭಿನಯದಲ್ಲೂ ಪಳಗಿರುವ ನಭಾ ಹಿಂದಿ ಚಿತ್ರರಂಗದಲ್ಲಿ ಭದ್ರವಾದ ನೆಲೆ ಕಂಡುಕೊಳ್ಳುತ್ತಾರೆ ಎನ್ನುವ ಅಭಿಪ್ರಾಯ ಎಲ್ಲೆಡೆ ಮೂಡಿಬರುತ್ತಿದೆ.

 

ಕಡಿಮೆ ಅವಧಿಯೊಳಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಭಾ ಈಗ ವೆಬ್ ಸಿರೀಸ್ ಒಂದರಲ್ಲಿ ನಟಿಸುವುದರೊಂದಿಗೆ ಬಾಲಿವುಡ್‍ನಲ್ಲೂ ಖಾತೆ ತೆರೆಯುವ ಹಂತದಲ್ಲಿದ್ದಾರೆ. ಕನ್ನಡದಲ್ಲಿ ಮಿಂಚಿರುವ ನಭಾ ನಟೇಶ್ ಬಾಲಿವುಡ್‍ನಲ್ಲಿ ಹೇಗೆ ಕಮಾಲ್ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *