ಹುದ್ದೆ ಹುಡುಕಿ ಹೋಗಲ್ಲ, ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ: ವಿಜಯೇಂದ್ರ

ಕಲಬುಗಿ: ಯಾವುದೇ ಮಂತ್ರಿ ಸ್ಥಾನವಾಗಲಿ, ಪಕ್ಷದ ಯಾವುದೇ ಉನ್ನತ ಹುದ್ದೆಗಾಗಲಿ ಹುಡುಕಿಕೊಂಡು ಹೋಗುವುದಿಲ್ಲ, ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನ ಅಥವಾ ಡಿಸಿಎಂ ಹುದ್ದೆಯ ಆಕಾಂಕ್ಷಿಯಾಗಿರಲಿಲ್ಲ, ಪ್ರಾಮಾಣಿಕವಾಗಿ ಹೇಳುತ್ತೇನೆ, ನಮ್ಮ ತಂದೆ ನನ್ನ ಸಲುವಾಗಿ ಯಾವುದೇ ಹುದ್ದೆಗೆ ಬೇಡಿಕೆ ಇಟ್ಟಿಲ್ಲ. ನನಗಿನ್ನು 35 ವರ್ಷ. ರಾಜಕೀಯವಾಗಿ ನಾನು ಸಾಕಷ್ಟು ಬೆಳೆಯಬೇಕಾಗಿದೆ, ಅಲ್ಲದೇ ಪಕ್ಷವನ್ನು ತಳಮಟ್ಟದಿಂದ ಬೆಳೆಸಬೇಕಾಗಿದೆ ಎಂದರು.

ನಮ್ಮ ತಂದೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಸೈಕಲ್ ಮೇಲೆ ಓಡಾಡಿ ಪಕ್ಷ ಕಟ್ಟಿ, ಬೆಳಸಿದ್ದಾರೆ. ರಾಜ್ಯದ ಜನ ಅವರ ಹೋರಾಟ ಗುರುತಿಸಿ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಪಕ್ಷದ ವರಿಷ್ಠರು ಯಾವುದೇ ಸ್ಥಾನಮಾನ ಕೊಟ್ಟರೂ ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.

ಖಾತೆ ಕುರಿತು ಸಚಿವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದು, ಅದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಗೆಹಿರಿಸಿಕೊಂಡು ಹೋಗುತ್ತಾರೆ. ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಆನಂದ ಸಿಂಗ್ ಸೇರಿದಂತೆ 17 ಜನ ಶಾಸಕರು ಕಾಂಗ್ರೆಸ್, ಜೆಡಿಎಸ್ ತ್ಯಜಿಸಿ ಬಂದಿದ್ದಾರೆ. ಅವರ ಬಗ್ಗೆ ಸರ್ಕಾರಕ್ಕೆ ಹಾಗೂ ಯಡಿಯೂರಪ್ಪರಿಗೆ ಗೌರವವಿವದೆ. ಅವರನ್ನು ಗೌರವಯುತವಾಗಿ ನಡೆಸಿಕೊಂಡು ಹೋಗಲಾಗುವುದು ಎಂದರು ತಿಳಿಸಿದರು.

ನಾನು ಕಲಬುರಗಿ ಅಳಿಯ: ನಾನು ಕಲಬುರಗಿ ಜಿಲ್ಲೆಯ ಅಳಿಯ, ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಬೇಕುತ್ತು. ಇದು ನನಗೂ ಸೇರಿದಂತೆ ಎಲ್ಲರಿಗೂ ನೋವು ತಂದಿದ್ದು, ನಿಜ ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ರಾಜ್ಯದಲ್ಲಿ ಬಿಜೆಪಿ ಪಕ್ಷ ತನ್ನ ಐದು ವರ್ಷ ಆಡಳಿತ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಇನ್ನು ನಾಲ್ಕು ಸ್ಥಾನಗಳು ಖಾಲಿಯಿದ್ದು, ಕಲಬುರಗಿ ಜಿಲ್ಲೆಗೆ ಸೂಕ್ತ ಸ್ಥಾನಮಾನ ಸಿಗುವ ವಿಶ್ವಾಸವಿದೆ ಎಂದರು. ನಾನು ಕಲಬುರಗಿ ಜಿಲ್ಲೆಯ ಅಳಿಯನಾಗಿದ್ದು, ಜಿಲ್ಲೆಗೆ ಸಚಿವ ಸ್ಥಾನ ಸಿಗದಿರುವುದು ನನಗೂ ವೈಯಕ್ತಿಕವಾಗಿ ಬೇಸರ ತಂದಿದೆ ಎಂದರು.

Comments

Leave a Reply

Your email address will not be published. Required fields are marked *