ಹುಚ್ಚ ವೆಂಕಟ್ ಸ್ಥಿತಿಗೆ ಮರುಗಿದ ಜಗ್ಗೇಶ್

-ವೆಂಕಟ್ ಮಾನಸಿಕ ಅಸ್ವಸ್ಥ ನಟ

ಬೆಂಗಳೂರು: ಮಂಡ್ಯದಲ್ಲಿ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮೇಲಾದ ಹಲ್ಲೆಯನ್ನು ನವರಸ ನಾಯಕ ಜಗ್ಗೇಶ್ ಖಂಡಿಸಿದ್ದಾರೆ.

ಮಂಡ್ಯ ಶ್ರೀರಂಗಪಟ್ಟಣದಲ್ಲಿ ಕೆಲವರು ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಲ್ಲೆಯ ವಿಡಿಯೋ ಜಗ್ಗೇಶ್ ಗಮನಕ್ಕೆ ಬಂದಿದ್ದು, ಹುಚ್ಚ ವೆಂಕಟ್ ಪರಿಸ್ಥಿತಿ ಕಂಡು ಮರುಗಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಹುಚ್ಚ ವೆಂಕಟ್ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡು ಚಿಕಿತ್ಸೆಯ ಅಗತ್ಯವಿದೆ ಎಂದಿದ್ದಾರೆ.

ವಿಡಿಯೋ ನೋಡಿ ತುಂಬಾ ದುಃಖವಾಯಿತು. ಸೆಲ್ಫಿ ಪ್ರಚಾರಕ್ಕಾಗಿ ಈ ರೀತಿ ಹಲ್ಲೆ ನಡೆಸೋದು ಎಷ್ಟು ಸರಿ? ಹುಚ್ಚ ವೆಂಕಟ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರೋ ಮನೋರೋಗಿ ಎಂದು ಇಡೀ ಕರ್ನಾಟಕಕ್ಕೆ ತಿಳಿದಿದೆ. ಸಾಧ್ಯವಾದ್ರೆ ಸಹಾಯ ಮಾಡಿ, ಇಲ್ಲವಾದ್ರೆ ಪೊಲೀಸರಿಗೆ ಮಾಹಿತಿ ನೀಡಿ. ಹೀಗೆ ಮೃಗೀಯವಾಗಿ ಕೈ ಮಾಡಿ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿ ಆನಂದಿಸದಿರಿ. ಇದು ಬುದ್ಧಿ ಇರೋ ಮನುಜರ ಲಕ್ಷಣವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಗ್ಗೇಶ್ ಪ್ರಶ್ನೆ: ನಿಮ್ಮ ಮನೆಯಲ್ಲಿ ಒಬ್ಬ ಅಣ್ಣ, ತಮ್ಮ ಅಥವಾ ತಂದೆ ವೆಂಕಟ್ ರೀತಿ ಮಾನಸಿಕ ರೋಗಿ ಆಗಿದ್ದರೆ ಅವರ ಮೇಲೆ ಕೈ ಮಾಡಿದ್ರೆ ನೋವು ಆಗುತ್ತೆ ಅಲ್ವಾ ಎಂದು ಹಲ್ಲೆ ನಡೆಸಿದ ಹುಡುಗರಿಗೆ ಜಗ್ಗೇಶ್ ಪ್ರಶ್ನೆ ಮಾಡಿದ್ದಾರೆ. ನನಗೂ ಒಬ್ಬ ಜಗವರಿಯದ ದೇವರ ಮಗ ತಮ್ಮನಿದ್ದಾನೆ. 55 ವರ್ಷದಿಂದ ಅವನನ್ನು ಮಗುವಂತೆ ಸಾಕುತ್ತಿದ್ದೇವೆ. ವೆಂಕಟ್ ಬಂಧುಗಳೇ ಸ್ವಾರ್ಥಬಿಟ್ಟು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಮಾನಸಿಕ ಅಸ್ವಸ್ಥನಾಗಿರೋ ನಟ ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿ ವಿಕೃತಿ ಮೆರೆದಿದ್ದಾರೆ. ದಯಮಾಡಿ ಸಂಬಂಧ ಆರಕ್ಷಕ ಠಾಣೆ ಇದು ನನ್ನ ದೂರು ಎಂದು ಭಾವಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಕರ್ನಾಟಕ ಹಾಗೂ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿ ವಿನಂತಿಸಿಕೊಂಡಿದ್ದಾರೆ.

ಒಬ್ಬ ನಟ ಸತ್ತಾಗ ಮರುಗದಿರಿ. ಬದುಕಿದ್ದಾಗ ಆತನ ಕೈ ಹಿಡಿದು ಸಹಾಯ ಮಾಡಿ. ಯಾಕೋ ಇಂದು ತುಂಬ ದುಃಖಿತನಾದೆ. ಇಷ್ಟೇನಾ ಪ್ರಾಪಂಚಿಕ ನಾಟಕೀಯ ನಡಾವಳಿ ಅನ್ನಿಸತೊಡಗಿದೆ. ದಯಮಾಡಿ ಬದುಕಿರುವ ಕಲಾವಿದನ ಪರವಾಗಿ ನಿಂತು ಸಹಾಯ ಮಾಡಿ. ಮಾನಸಿಕ ಅಸ್ವಸ್ಥನ ಮೇಲೆ ಕೈ ಮಾಡಿಸೋದನ್ನು ಕೊನೆ ಮಾಡಿಸಿ ಎಂದು ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜಗ್ಗೇಶ್ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಅಭಿಮಾನಿ, ಪ್ರತಿಯೊಬ್ಬರಿಗೂ ಕನಿಕರ ತೋರುವ ಹಾಗೂ ಸಹಾಯ ಮಾಡುವ ನಿಮ್ಮ ಗುಣ ದೊಡ್ಡದು ಜಗ್ಗಣ್ಣ. ಸುಮಾರು 15 ವರ್ಷ ಹಿಂದೆ ಇರಬಹುದು ನಮಗೂ ನೀವು ಸಹಾಯ ಮಾಡಿದ್ರಿ. ಆಗ ನಾನು ನಮ್ಮಣ್ಣ ಶ್ರೀ ರಾಮಪುರದಲ್ಲಿ ರಾಮಚಂದ್ರ ಪುರದಲ್ಲಿ ಓಕಳಿ ಪುರದಲ್ಲಿ ಪ್ರೈವೇಟ್ ಹಾಲು ಹಾಕುತಿದ್ದೀವಿ. ನಿಮ್ಮ ಸಹಾಯ ನಾವು ಇವತ್ತಿಗೂ ಮರೆತಿಲ್ಲ ನಿಮ್ಮನ್ನ ನೆನಪಿಸಿಕೊಳ್ಳುತಿರುತ್ತೇವೆ ಎಂದು ಬರೆದು ಧನ್ಯವಾದ ಸಲ್ಲಿಸಿದ್ದಾರೆ.

Comments

Leave a Reply

Your email address will not be published. Required fields are marked *