– ಯುವಕರ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
ತುಮಕೂರು: ಇಡೀ ಪ್ರಪಂಚವನ್ನು ನಡುಗಿಸುತ್ತಿರುವ ಕೊರೊನಾ ವೈರಸ್, ಮಾನವ ಕುಲಕ್ಕೆ ಮಹಾ ಮಾರಿಯಾಗಿ ಕಾಡುತ್ತಿದೆ. ಸೋಂಕಿನಿಂದ ಮೃತಪಟ್ಟವರು, ಕುಟುಂಬದ ಸದಸ್ಯರ ಬದಲು ಬೇರೆಯವರಿಂದ ಅಂತ್ಯಸಂಸ್ಕಾರ ಮಾಡಿಸಿಕೊಳ್ಳುತ್ತಿದ್ದಾರೆ. ಬೇರೆ ಕಾರಣದಿಂದ ಮೃತಪಟ್ಟರ ಹತ್ತಿರ ಹೋಗುವುದಕ್ಕೂ ಜನರು ಹಿಂದೇಟು ಹಾಕುತ್ತಿದ್ದಾರೆ. ಇಂತಹದೊಂದು ಘಟನೆ ನಗರದ ಸೀಲ್‍ಡೌನ್ ಪ್ರದೇಶವಾಗಿರುವ ಕೆಎಚ್‍ಬಿ ಕಾಲೋನಿಯಲ್ಲಿ ನಡೆದಿದ್ದು, ಅವರ ಸಹಾಯಕ್ಕೆ ಮುಸ್ಲಿಂ ಯುವಕರು ಬಂದು ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ಸೋಂಕಿತ ರೋಗಿ-535 ವೃದ್ಧ ಸಾವನ್ನಪ್ಪಿದ್ದು, ಅವರಿಂದ ಪಕ್ಕದ ಮನೆಯ ದಂಪತಿಗೂ ಸೋಂಕು ತಗುಲಿತ್ತು. ಇದರಿಂದ ಕೆಎಚ್‍ಬಿ ಕಾಲೋನಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಕಳೆದ ರಾತ್ರಿ ಮತ್ತೊಬ್ಬ ವೃದ್ಧ ಅನಾರೋಗ್ಯದಿಂದ ಸಹಜವಾಗಿ ಸಾವನ್ನಪ್ಪಿದ್ದು, ಮುಸ್ಲಿಂ ಯುವಕರು ಅಂತ್ಯಕ್ರಿಯೆ ನೆರವೇರಿಸಲು ಸಹಾಯ ಮಾಡಿದ್ದಾರೆ.

ನಗರದ ಎರಡನೇ ಕಂಟೈನ್ಮೆಂಟ್ ಝೋನ್ ಕೆಎಚ್‍ಬಿ ಕಾಲೋನಿಯಲ್ಲಿ ವಾಸವಿದ್ದ 60 ವರ್ಷದ ವೃದ್ಧ ಹೆಚ್.ಎಸ್ ನಾರಾಯಣ ರಾವ್ ಅನಾರೋಗ್ಯದಿಂದ ಕಳೆದ ರಾತ್ರಿ ಸಾವನ್ನಪ್ಪಿದ್ದರು. ಟೈಲರ್ ವೃತ್ತಿಯನ್ನ ಮಾಡುತ್ತಿದ್ದ ಅವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು, ಒಬ್ಬರು ಹೆಣ್ಣು ಮಗಳಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಮೊದಲೇ ಒಂದು ಕಾಲು ಕಳೆದುಕೊಂಡು ವಿಶೇಷ ಚೇತನರಾಗಿದ್ದ ವೃದ್ಧ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಅವರಿಗೆ ಕೊವಿಡ್-19 ಪರೀಕ್ಷೆ ಮಾಡಲಾಗಿದ್ದು, ರಿಪೋರ್ಟ್ ನೆಗೆಟಿವ್ ಬಂದಿತ್ತು.

ವೃದ್ಧ ಸಾವನ್ನಪ್ಪಿದ ಸಂದರ್ಭದಲ್ಲಿ ಏರಿಯಾ ಸಂಪೂರ್ಣ ಸೀಲ್‍ಡೌನ್ ಆಗಿದ್ದರಿಂದ ಕುಟುಂಬದವರನ್ನು ಬಿಟ್ಟರೆ, ಸಂಬಂಧಿಕರು ಯಾರೂ ಸ್ಥಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂತ್ಯಸಂಸ್ಕಾರ ಮಾಡಲು ಪರದಾಡುತ್ತಿದ್ದ ಅವರನ್ನು ಕಂಡು ಕೊರೊನಾ ವಾರಿಯರ್ಸ್ ಗಳಾದ ಮಹಮದ್ ಖಲಿದ್, ಇಮ್ರಾನ್, ಟಿಪ್ಪು, ಶೇರು, ಶಾರುಖ್, ತೋಫಿಕ್ ಸಾದ್, ಖತೀಭ್ ಹಾಗೂ ಮನ್ಸೂರ್ ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತದ ಅನುಮತಿಯನ್ನ ಪಡೆದು, ಅಂಬುಲೆನ್ಸ್ ವ್ಯವಸ್ಥೆಯ ಜೊತೆಗೆ ಧನ ಸಹಾಯವನ್ನು ಮಾಡಿದ್ದಾರೆ. ಈ ಮೂಲಕ ವೃದ್ಧನ ಮೃತದೇಹವನ್ನ ಚಿತಾಗಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾನವೀಯತೆ ಮೆರೆದ ಯುವಕರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಬಳಿಕ ಪತ್ನಿ ಹಾಗೂ ಮಕ್ಕಳು ಸೇರಿ ಗಾರ್ಡನ್ ಏರಿಯಾದಲ್ಲಿರುವ ಸರ್ಕಾರಿ ವಿದ್ಯುತ್ ಚಿತಾಗಾರದಲ್ಲಿ ಇಂದು ವೃದ್ಧನ ಅಂತ್ಯಕ್ರಿಯೆಯನ್ನ ನೆರವೇರಿಸಿದ್ದಾರೆ. ವೃದ್ಧನ ಅಂತ್ಯಕ್ರಿಯೆಗೆ ಸಹಕರಿಸಿದ ಕೊರೊನಾ ವಾರಿಯರ್ಸ್ ತಂಡಕ್ಕೆ ವೃದ್ಧನ ಕುಟುಂಬದವರು ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply