ಹಿಂದೂ ಮಹಿಳೆಯನ್ನು ಮತಾಂತರಿಸಿ‌‌ ಮದುವೆಯಾದ ಮುಸ್ಲಿಂ ಯುವಕ ನಾಪತ್ತೆ

– ಗಂಡನನ್ನು ಬಿಟ್ಟು ಬಂದ ಮಹಿಳೆ ಬೀದಿಪಾಲು

ಮಂಗಳೂರು: ಹಿಂದೂ ಧರ್ಮದ ಮಹಿಳೆಯೋರ್ವಳನ್ನು ತನ್ನ ಗಂಡನಿಂದ ಬೇರೆ ಮಾಡಿ ಮುಸ್ಲಿಂ ಧರ್ಮಕ್ಕೆ‌ ಮತಾಂತರ ಮಾಡಿ ಮದುವೆಯಾಗಿ ಇದೀಗ ಅರ್ಧಕ್ಕೆ ಕೈಕೊಟ್ಟು ಓಡಿ ಹೋದ ಲವ್ ಜಿಹಾದ್ ಮಾದರಿಯ ಘಟನೆ ದಕ್ಷಿಣ ಕನ್ನಡದಲ್ಲಿ ಬೆಳಕಿಗೆ ಬಂದಿದೆ.

ಕೇರಳದ ಕಣ್ಣೂರಿನ ನಿವಾಸಿ ಶಾಂತಿ ಜೂಬಿ 2014ರಲ್ಲಿ ಫೇಸ್ಬುಕ್ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಇಬ್ರಾಹಿಂ ಖಲೀಲ್‌ನ ಪರಿಚಯವಾಗಿದೆ.  ಈ ಪರಿಚಯ ಆ ಬಳಿಕ ಪ್ರೇಮಕ್ಕೆ ತಿರುಗಿದೆ.

ಗಂಡನನ್ನು ಬಿಟ್ಟು ಬಂದಿದ್ದ ಶಾಂತಿ 2017ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಆಸಿಯಾ ಎಂದು ಬದಲಾಯಿಸಿದ್ದಾಳೆ. ಬಳಿಕ ಬೆಂಗಳೂರಿನಲ್ಲಿ ಇವರಿಬ್ಬರು ಮದುವೆಯನ್ನು ಮಾಡಿಕೊಂಡಿದ್ದರು. ಮೊದಲ ಗಂಡ ಹಾಗೂ ಕುಟುಂಬವನ್ನು ತ್ಯಜಿಸಿ ಖಲೀಲ್ ಜೊತೆ ಬಂದ ಶಾಂತಿ ಜೂಬಿ ಯಾನೆ ಆಸಿಯಾ ಇದೀಗ ತನಗೆ ಖಲೀಲ್ ಮೋಸ ಮಾಡಿದ್ದಾನೆ ಎಂದು ಪೊಲೀಸರು, ಮುಸ್ಲಿಂ ಸಂಘಟನೆ, ಹ್ಯೂಮನ್ ರೈಟ್ಸ್ ಕಮಿಟಿ ಮೊರೆ ಹೋಗಿದ್ದಾಳೆ.

ಪ್ರಾರಂಭದಲ್ಲಿ ಮದುವೆಯಾದ ವಿಚಾರ ಖಲೀಲ್ ಮನೆಯವರಿಗೆ ಗೊತ್ತಿರಲಿಲ್ಲ.ಆಗೊಮ್ಮೆ ಈಗೊಮ್ಮೆ ಖಲೀಲ್ ಬೆಂಗಳೂರಿನಲ್ಲಿ ವಾಸವಿದ್ದ ಆಸಿಯಾಳನ್ನು ಭೇಟಿಯಾಗಿ ಬರುತ್ತಿದ್ದ. 2020ರ ಜನವರಿವರೆಗೆ ಇವರಿಬ್ಬರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಖಲೀಲ್ ಮನೆಯವರಿಗೆ ವಿಷಯ ಗೊತ್ತಾಗುತ್ತಿದಂತೆ ಖಲೀಲ್ ನ ಸಹೋದರ ಇಬ್ರಾಹಿಂ ಶಿಯಾಬ್ ಆಸಿಯಾಗೆ ಬೆದರಿಕೆ ಒಡ್ಡಿ, ನೀವಿಬ್ಬರು ಜೊತೆಗಿರಬಾರದು ಎಂದು ಎಚ್ಚರಿಕೆ ನೀಡಿದ್ದಾನೆ.

ಕಳೆದ ಏಳೆಂಟು ತಿಂಗಳಿಂದ ಆಸಿಯಾಳಿಗೆ ಸರಿಯಾಗಿ ಖಲೀಲ್ ಸಂಪರ್ಕ ಸಾಧ್ಯವಾಗಿಲ್ಲ. ಹೀಗಾಗಿ ಖಲೀಲ್‌ ಹುಡುಕಿಕೊಂಡು ಬೆಂಗಳೂರಿನಿಂದ ಸುಳ್ಯಕ್ಕೆ ಆಸಿಯಾ ಬಂದಿದ್ದು, ಖಲೀಲ್ ಮನೆಯವರಿಂದ ಯಾವುದೇ ಸರಿಯಾದ ಪ್ರತಿಕ್ರಿಯೆ ಸಿಕ್ಕಿಲ್ಲ. ಮುಸ್ಲಿಂ ಸಂಘಟನೆ, ಪೊಲೀಸರ ಮುಂದೆ ಹೋದರೂ ನ್ಯಾಯ ಸಿಕ್ಕಿಲ್ಲ ಎಂದು ಆಸಿಯಾ ದೂರಿದ್ದಾಳೆ.

ಸದ್ಯ ನನಗೆ ನನ್ನ ಗಂಡನನ್ನು ಮತ್ತೆ ನನ್ನ ಜೊತೆ ಇರುವಂತೆ ಮಾಡಿ ಎಂದು ಆಸಿಯಾ ಕೇಳಿಕೊಂಡಿದ್ದಾಳೆ. ಹ್ಯೂಮನ್ ರೈಟ್ಸ್ ಕಮಿಷನ್‌ನ ಮೊರೆ ಹೋಗಿರುವ ಆಸಿಯಾ ಶುಕ್ರವಾರದ ಒಳಗೆ ಗಂಡ ಸಿಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.

Comments

Leave a Reply

Your email address will not be published. Required fields are marked *