ಹಿಂದೂ ದೇವಾಲಯಕ್ಕೆ ನಿವೇಶನ ದಾನ – ಭಾವೈಕ್ಯತೆ ಮೆರೆದ ಮುಸ್ಲಿಂ ಕುಟುಂಬ

ಶಿವಮೊಗ್ಗ: ಇಂದು ಹಲವೆಡೆ ಹಿಂದೂ ಮುಸ್ಲಿಂ ನಡುವೆ ಕೋಮು ಗಲಭೆ ನಡೆಯುತ್ತಿವೆ. ಆದರೆ ಗ್ರಾಮದಲ್ಲಿ ಮಾತ್ರ ಆಗಿಲ್ಲ. ಎಲ್ಲ ಧರ್ಮೀಯರು ಸಹೋದರರ ರೀತಿ ಸಾಮರಸ್ಯದಿಂದ ಬಾಳುತ್ತಿದ್ದಾರೆ. ಈ ಸಾಮರಸ್ಯ ಇರುವುದರಿಂದಲೇ ಮುಸ್ಲಿಂ ಕುಟುಂಬವೊಂದು ಹಿಂದೂ ದೇವಾಲಯ ನಿರ್ಮಾಣಕ್ಕೆ ಲಕ್ಷಾಂತರ ಮೌಲ್ಯ ಬೆಲೆ ಬಾಳುವ ನಿವೇಶನವನ್ನು ದಾನವಾಗಿ ನೀಡಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್‍ನ ತವಕ್ಕಲ್ ಕುಟುಂಬದ ಮೊಯಿದ್ದೀನ್ ಅವರಿಗೆ ಸೇರಿದ ಜಾಗದಲ್ಲಿ ಭೂತಪ್ಪ ದೇವರು ನೆಲೆಸಿದ್ದಾನೆ. ಈ ದೇವರನ್ನು ಗ್ರಾಮದ ರಾಮಣ್ಣನ ವಂಶಸ್ಥರು ಸೇರಿದಂತೆ ಗ್ರಾಮಸ್ಥರು ಸಹ ಪೂಜಿಸಿಕೊಂಡು ಬರುತ್ತಿದ್ದರು. ಆದರೆ ಈ ಭೂಮಿ ಮುಸ್ಲಿಂ ಧರ್ಮದ ಮೊಯಿದ್ದೀನ್ ಅವರದ್ದಾಗಿತ್ತು. ತಮ್ಮ ಜಾಗದಲ್ಲಿ ಹಿಂದೂ ಧರ್ಮದ ದೇವರು ಒಂದು ಇದೆ ಎಂದು ಗೊತ್ತಿದ್ದರೂ ಸಹ ಮೊಯಿದ್ದೀನ್ ಕುಟುಂಬದವರು ಇದುವರೆಗೂ ಯಾವುದೇ ತೊಂದರೆ ಕೊಡದೇ ಪೂಜಾ ಕಾರ್ಯಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಮೊಯಿದ್ದೀನ್ ಅವರಿಗೆ ನಾಲ್ವರು ಮಕ್ಕಳು. ಈ ನಾಲ್ವರು ಮಕ್ಕಳು ತಂದೆಯ ಆಸ್ತಿಗಳು ಇತ್ತೀಚೆಗೆ ಭಾಗ ಮಾಡಿಕೊಂಡಿದ್ದಾರೆ. ಆಸ್ತಿ ಭಾಗ ಮಾಡಿಕೊಳ್ಳುವ ವೇಳೆ ನಾಲ್ವರು ಒಟ್ಟಿಗೆ ಕುಳಿತು ಚರ್ಚಿಸಿ, ನಂತರ ಮುಸ್ಲಿಂ ಹಾಗೂ ಹಿಂದೂ ಮುಖಂಡರನ್ನು ಸೇರಿಸಿಕೊಂಡು ತಮ್ಮ ಸ್ಥಳದಲ್ಲಿ ದೇವರಿದ್ದ ಲಕ್ಷಾಂತರ ಬೆಲೆ ಬಾಳುವ ನಿವೇಶನವನ್ನು ಭೂತಪ್ಪ ದೇವರ ದೇವಾಲಯ ನಿರ್ಮಾಣಕ್ಕೆ ಉಚಿತವಾಗಿ ಜೊತೆಗೆ ಅದರ ಮಾಲೀಕತ್ವವನ್ನು ಸಹ ಹಿಂದೂಗಳಿಗೆ ಲಿಖಿತವಾಗಿ ಬರೆದುಕೊಡುವ ಮೂಲಕ ಪರಧರ್ಮ ಸಹಿಷ್ಣುತೆ ಮೆರೆದಿದ್ದಾರೆ.

Comments

Leave a Reply

Your email address will not be published. Required fields are marked *