ಹಾಸನದಲ್ಲಿ ಏರುತ್ತಿವೆ ಅಪರಾಧ ಪ್ರಕರಣಗಳು- ಸ್ವತಃ ಎಸ್‍ಪಿ ರೌಂಡ್ಸ್

– ಪ್ರತಿ ಠಾಣೆಗೆ ಭೇಟಿ ನೀಡುತ್ತಿರುವ ಎಸ್‍ಪಿ

ಹಾಸನ: ಹಾಸನದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಜಿಲ್ಲೆಯ ಜನರನ್ನು ಬೆಚ್ಚಿಬೀಸಿವೆ. ಹೀಗಾಗಿ ಸ್ವತಃ ಎಸ್‍ಪಿ ಶ್ರೀನಿವಾಸಗೌಡ ಅವರು ಠಾಣೆಗಳ ರೌಂಡ್ಸ್ ಆರಂಭಿಸಿದ್ದಾರೆ.

ಪೊಲೀಸ್ ಠಾಣೆಗಳಿಗೆ ಖುದ್ದು ಭೇಟಿ ನೀಡುತ್ತಿರುವ ಹಾಸನ ಎಸ್‍ಪಿ ಶ್ರೀನಿವಾಸಗೌಡ, ಅಪರಾಧ ಪ್ರಕರಣ ತಡೆಯಲು ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಲಾಕ್‍ಡೌನ್ ನಂತರ ಹಾಸನದಲ್ಲಿ ಅಪರಾಧ ಪ್ರಕರಣ ಹೆಚ್ಚಾಗಿದ್ದವು. ತದನಂತರ ನಿರಂತರ ಕಾರ್ಯಾಚರಣೆ ನಡೆಸಿದ ಪೊಲೀಸ್ ಇಲಾಖೆ ಅಪರಾಧ ಪ್ರಕರಣ ನಿಯಂತ್ರಿಸಲು ಶ್ರಮಿಸಿತ್ತು. ಈ ಹಿನ್ನೆಲೆಯಲ್ಲಿ ಮತ್ತಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿರುವ ಹಾಸನ ಎಸ್‍ಪಿ ಶ್ರೀನಿವಾಸ್‍ಗೌಡ ಪೊಲೀಸ್ ಠಾಣೆಗೆ ಖುದ್ದು ಭೇಟಿ ನೀಡಿ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಿದ್ದಾರೆ.

ರಾತ್ರಿ 9:45ಕ್ಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಂಡ್ ಬರಲು ಸಿಬ್ಬಂದಿಗೆ ಸೂಚನೆ ನೀಡಿದ್ದು, ಅಂಗಡಿಗಳಿಗೆ ಬಾಗಿಲು ಹಾಕಲು ಸೂಚನೆ ನೀಡಲು ತಿಳಿಸಿದ್ದಾರೆ. ಸಿಗರೇಟು ಸೇದುತ್ತ, ಗುಂಪಾಗಿ ನಿಲ್ಲುವ ಹುಡುಗರಿಗೆ ಎಚ್ಚರಿಕೆ ನೀಡಿ, ಯಾಕೆ ಗುಂಪುಗೂಡಿದ್ದಾರೆ ಎಂಬುದರ ಬಗ್ಗೆಯೂ ಮಾಹಿತಿ ಕಲೆ ಹಾಕಬೇಕು. ರಾತ್ರಿ ಒಂಟಿ ಮಹಿಳೆಯರು ಓಡಾಡುತ್ತಿದ್ದರೂ ಅವರಿಗೆ ಬೇಕಾದ ಸಹಾಯ ಒದಗಿಸಬೇಕು ಎಂದು ಸೂಚಿಸಿದ್ದಾರೆ.

ರಾತ್ರಿ 12:30ರ ನಂತರ ಅನವಶ್ಯಕವಾಗಿ ಓಡಾಡುವವರ ಮೊಬೈಲ್‍ನಿಂದ ನಿಮ್ಮ ಮೊಬೈಲ್‍ಗೆ ರಿಂಗ್ ಮಾಡಿ, ಅವರ ಐಡಿ ಫ್ರೂಫ್ ಕೂಡ ಪಡೆದುಕೊಳ್ಳಿ. ಆ ಏರಿಯಾದಲ್ಲಿ ಮನೆಗಳ್ಳತನ ನಡೆದರೆ ಸುಳಿವು ಪತ್ತೆ ಹಚ್ಚಿ. ನಿಮಗೆ ಅಪಾಯ ಬರುವ ಸಂಭವ ಇದ್ದರೆ ಕೂಡಲೇ ವಾಕಿಟಾಕಿ ಬಳಸಿ ಮೆಸೇಜ್ ಕಳುಹಿಸಿ. ವಾಕಿ ಇಲ್ಲದೆ ಯಾರೂ ರಾತ್ರಿ ಬೀಟ್ ಮಾಡದಂತೆ ಎಸ್‍ಪಿ ಸೂಚನೆ ನೀಡಿದ್ದಾರೆ. ಎಲ್ಲರೂ ಊಟ ಮಾಡಿ ನಂತರ ಬೀಟ್ ಸರ್ವ್ ಮಾಡಲು ತಿಳಿಸಿರುವ ಎಸ್‍ಪಿ, ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲು ಸಿಬ್ಬಂದಿಗೆ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *