ಹಾಸನಕ್ಕೆ ಕೇರಳ ಕೊರೊನಾ ಟೆನ್ಶನ್- ಶೆಟ್ಟಿಹಳ್ಳಿ ಚರ್ಚ್‍ನಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ಪರ್ಮಿಷನ್..!

ಹಾಸನ: ಕೇರಳದಲ್ಲಿ ಮತ್ತೆ ಕೊರೊನಾ ಸ್ಫೋಟವಾಗ್ತಿದೆ. ಇಷ್ಟರವರೆಗೆ ಕೇರಳದಿಂದ ಕರ್ನಾಟಕದ ಗಡಿಜಿಲ್ಲೆಗಳಿಗೆ ಕಂಟಕ ಎದುರಾಗಿತ್ತು. ಈಗ ಕರ್ನಾಟಕದ ಮತ್ತೊಂದು ಜಿಲ್ಲೆಗೆ ಕೇರಳ ಕೊರೊನಾ ಟೆನ್ಶನ್ ಶುರುವಾಗಿದೆ.

ಮಹಾಮಾರಿ ಕೊರೊನಾದಿಂದ ಚೇತರಿಸಿಕೊಳ್ಳುವ ಹಂತದಲ್ಲಿರುವಾಗಲೇ, ಕೊರೊನಾ ಎರಡನೇ ಅಲೆಯ ಆತಂಕ ಹೆಚ್ಚಾಗುತ್ತಿದೆ. ಪಕ್ಕದ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಕೇರಳ ಗಡಿಭಾಗದ ಬಳಿಕ ಈಗ ಹಾಸನ ಜಿಲ್ಲೆಯಲ್ಲಿ ಕೇರಳ ಕೊರೊನಾದ ಟೆನ್ಶನ್ ಹೆಚ್ಚಾಗಿದೆ. ಕಾರಣ ಕೇರಳದಿಂದ ಶೂಟಿಂಗ್‍ಗೆ ಬಂದ 200ಕ್ಕೂ ಅಧಿಕ ಜನರ ಚಿತ್ರತಂಡ.

ಕರ್ನಾಟಕದಲ್ಲಿ ದಿನಕ್ಕೆ 500ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ವರದಿಯಾಗ್ತಿದ್ರೂ ಹಾಸನ ಜಿಲ್ಲಾಡಳಿತ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಂತೆ ಕಾಣ್ತಿಲ್ಲ. ಕೇರಳದಲ್ಲಿ ಕೊರೊನಾ ಜಾಸ್ತಿಯಾಗ್ತಲೇ ಇದ್ರೂನೂ ಅಲ್ಲಿಂದ ಬರೋಬ್ಬರಿ 200ಕ್ಕೂ ಅಧಿಕ ಜನರುಳ್ಳ ಚಿತ್ರತಂಡವೊಂದಕ್ಕೆ, ಹಾಸನದ ಪ್ರವಾಸಿ ಸ್ಥಳ ಶೆಟ್ಟಿಹಳ್ಳಿ ಚರ್ಚ್‍ನಲ್ಲಿ ಚಿತ್ರೀಕರಣ ಮಾಡೋಕೆ ಪರ್ಮಿಷನ್ ಕೊಟ್ಟಿದೆ. ಮಲಯಾಳಂನ ಮಿನ್ನಲ್ ಮುರಲಿ ಚಿತ್ರತಂಡ ಕಳೆದ 10 ದಿನಗಳಿಂದ ಅದ್ಧೂರಿ ಸೆಟ್ ಹಾಕಿ ಸ್ಥಳೀಯ 300ಕ್ಕೂ ಅಧಿಕ ಮಂದಿಯನ್ನು ಸೇರಿಸಿಕೊಂಡು ಶೂಟಿಂಗ್ ನಡೆಸುತ್ತಿದ್ದಾರೆ. ಮಾತ್ರವಲ್ಲ ಶೂಟಿಂಗ್‍ಗೆ ಸಂಬಂಧಿಸಿದಂತೆ ಹಲವರು ಕೇರಳದಿಂದ ಬಂದು ಹೋಗ್ತಿದ್ದಾರೆ. ಇದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಕೊರೊನಾ ಹೆಚ್ಚಾಗ್ತಿರೋದ್ರಿಂದ ರೂಲ್ಸ್ ಜಾರಿ ಮಾಡಬೇಕಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಮಾತ್ರ ಬಿಂದಾಸ್ ಆಗಿ ಪರ್ಮಿಷನ್ ಕೊಟ್ಟಿದ್ದಾರೆ. ಹಾಸನ ಡಿಹೆಚ್‍ಓ ಸತೀಶ್ ಕುಮಾರ್ ರನ್ನು ಕೇಳಿದ್ರೆ, ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಮ್ಮ ಒಂದು ತಂಡ ಅಲ್ಲೇ ಬೀಡು ಬಿಟ್ಟು ಟೆಸ್ಟ್ ಮಾಡುತ್ತಿದೆ. ಕಡ್ಡಾಯವಾಗಿ ನೆಗೆಟಿವ್ ರಿಪೋರ್ಟ್ ನ್ನು ತೆಗೆದುಕೊಂಡು ಬಂದವರಿಗೆ ಮಾತ್ರ ಜಿಲ್ಲೆಯೊಳಗೆ ಎಂಟ್ರಿ ನೀಡಲಾಗ್ತಿದೆ ಅಂತಾರೆ.

ಒಟ್ಟಿನಲ್ಲಿ ಡಿಹೆಚ್‍ಓ ಸದ್ಯಕ್ಕೆ ಯಾರೂ ಆತಂಕ ಪಡುವ ಅಗತ್ಯವಿಲ್ಲವೆಂದಿದ್ದಾರೆ. ಆದರೆ ಏನಾದ್ರೂ ಅನಾಹುತವಾದ್ರೆ ಯಾರು ಹೊಣೆ ಎಂಬುದೇ ಇಲ್ಲಿ ಪ್ರಶ್ನೆಯಾಗಿದೆ.

Comments

Leave a Reply

Your email address will not be published. Required fields are marked *