ಹಾವೇರಿಯಲ್ಲಿ ಮಳೆಯ ಆರ್ಭಟ- ಕೆರೆ ಕೋಡಿ ಒಡೆದು ಧುಮ್ಮಿಕ್ಕಿ ಹರಿದ ನೀರು

ಹಾವೇರಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಧಾರಾಕಾರ ಮಳೆಯಿಂದಾಗಿ ಕೆರೆ ತುಂಬಿದೆ. ನೀರಿನ ಒತ್ತಡಕ್ಕೆ ಕೆರೆ ಕೋಡಿ ನೀರು ರಭಸವಾಗಿ ಹರಿದಿದೆ.

ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಕೆರೆ ಕೋಡಿ ಒಡೆದಿದ್ದು, ಅಪಾರ ಪ್ರಮಾಣದ ನೀರು ಹೊರ ಬಿದ್ದಿದೆ. ಧುಮ್ಮಿಕ್ಕಿ ನೀರು ಹರಿದಿದ್ದು, ಭಯಾನಕ ವಾತಾವರಣ ನಿರ್ಮಾಣವಾಗಿದೆ. ಕೆರೆ ಭರಪೂರ ತುಂಬಿದ್ದು, ಒತ್ತಡಕ್ಕೆ ಕೋಡಿ ಒಡೆದಿದೆ. ಅಪಾರ ಪ್ರಮಾಣದ ನೀರು ಕುಮುದ್ವತಿ ನದಿಗೆ ಸೇರುತ್ತಿದ್ದು, ನೀರಿನ ಹರಿವಿನ ರಭಸಕ್ಕೆ ಸ್ಥಳಿಯರು ಭಯಭೀತರಾಗಿದ್ದಾರೆ. ಜಿಲ್ಲೆಯಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಎಡಬಿಡದೆ ಸುರಿಯುತ್ತಿದೆ.

ಅಪಾರ ಪ್ರಮಾಣದ ಮಳೆಯಿಂದಾಗಿ ವರದಾ ನದಿ ತುಂಬಿ ಹರಿಯುತ್ತಿದ್ದು, ಹಾವೇರಿ ತಾಲೂಕಿನ ನಾಗನೂರು ಮತ್ತು ಸವಣೂರು ತಾಲೂಕಿನ ಕಳಸೂರು ಸೇತುವೆಗಳು ಜಲಾವೃತವಾಗಿವೆ. ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದು, ನಾಗನೂರು-ಕೂಡಲ, ಕಳಸೂರು-ದೇವಗಿರಿ ಸಂಪರ್ಕ ಕಡಿತವಾಗಿದೆ.

ಅಲ್ಲದೆ ವರದಾ ನದಿಗೆ ಭಾರೀ ಪ್ರಮಾಣದ ನೀರು ಬರುತ್ತಿರುವ ಹಿನ್ನೆಲೆ ಹಿರೇಮರಳಿಹಳ್ಳಿ ಮತ್ತು ಕೋಣನತಂಬಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಮೇಲೆ ನೀರು ಭರಪೂರ ತುಂಬಿ ಹರಿಯುತ್ತಿದೆ. ಜಿಲ್ಲೆಯ ಸವಣೂರು ತಾಲೂಕಿನ ಹಿರೇಮರಳಿಹಳ್ಳಿ ಗ್ರಾಮದ ಬಳಿ ಸೇತುವೆ ಸೇತುವೆ ಜಲಾವೃತವಾಗಿದೆ. ಇದರಿಂದಾಗಿ ನದಿ ಪಾತ್ರದ ಕೆಲವು ಗ್ರಾಮಗಳ ಜನರಿಗೆ ಆತಂಕ ಉಂಟಾಗಿದೆ.

Comments

Leave a Reply

Your email address will not be published. Required fields are marked *