ಹಾರ್ದಿಕ್ ಪಾಂಡ್ಯ 228 ಜೆರ್ಸಿ ನಂಬರನ್ನೇ ಆಯ್ಕೆ ಮಾಡಿದ್ದರ ಹಿಂದಿನ ಕಹಾನಿ?

ಮುಂಬೈ: ಕಳೆದ ಎರಡು ತಿಂಗಳಿನಿಂದ ಲಾಕ್‍ಡೌನ್ ಕಾರಣದಿಂದ ಮನೆಯಲ್ಲೇ ಉಳಿದುಕೊಂಡಿರುವ ಕ್ರೀಡಾಪಟುಗಳು ವಿರಾಮದ ಸಮಯವನ್ನು ಕುಟುಂಬ ಸದಸ್ಯರೊಂದಿಗೆ ಕಳೆಯುತ್ತಿದ್ದಾರೆ. ಇದೇ ವೇಳೆ ಕೆಲ ಕ್ರಿಕೆಟ್ ಆಟಗಾರರು ಅಭಿಮಾನಿಗಳೊಂದಿಗೆ ತಮ್ಮ ಜೀವನದ ಪ್ರಮುಖ ಘಟನೆಗಳ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತ ಐಸಿಸಿ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುವ ಕಾರ್ಯವನ್ನು ಮಾಡುತ್ತಿವೆ.

ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಫೋಟೋ ಶೇರ್ ಮಾಡಿದ್ದ ಐಸಿಸಿ, ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ 228ರ ಜೆರ್ಸಿ ನಂಬರನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ ಗೊತ್ತಾ ಎಂದು ಪ್ರಶ್ನೆ ಮಾಡಿತ್ತು. ಐಸಿಸಿ ಟ್ವೀಟ್‍ಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿ, ತಮ್ಮದೇ ಉತ್ತರಗಳನ್ನು ನೀಡಿ ರೀ ಟ್ವೀಟ್ ಮಾಡಿದ್ದರು.

2009ರಲ್ಲಿ ನಡೆದಿದ್ದ ವಿಜಯ್ ಮರ್ಚೆಂಟ್ ಅಂಡರ್-16 ಟೂರ್ನಿಯ ಭಾಗವಾಗಿ ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬರೋಡಾ ಪರ ಕಣಕ್ಕೆ ಇಳಿದಿದ್ದರು. ಪಂದ್ಯದಲ್ಲಿ ಬರೋಡಾ ತಂಡದ 60 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ಇಳಿದಿದ್ದ ಹಾರ್ದಿಕ್ ಸ್ಫೋಟಕ ಪ್ರದರ್ಶನ ನೀಡಿ ದ್ವಿಶತಕ ಗಳಿಸಿದ್ದರು. ಪಂದ್ಯದಲ್ಲಿ 228 ರನ್ ಗಳಿಸಿದ್ದ ಪಾಂಡ್ಯ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ದ್ವಿಶತಕ ಗಳಿಸಿದ್ದರು. ಇಂದಿಗೂ ಹಾರ್ದಿಕ್ ಪಾಂಡ್ಯ ಗಳಿಸುವ ಏಕೈಕ ದ್ವಿಶತಕ ಇದಾಗಿದೆ. ಇದೇ ಕಾರಣದಿಂದಲೇ ಹಾರ್ದಿಕ್ 228 ಸಂಖ್ಯೆಯನ್ನೇ ಜೆರ್ಸಿ ನಂಬರ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅಭಿಮಾನಿಯೊಬ್ಬರು ಐಸಿಸಿ ಪ್ರಶ್ನೆಗೆ ಉತ್ತರಿಸಿದ್ದರು.

ಜರ್ಸಿ ನಂಬರ್ ಹಾರ್ದಿಕ್ ಗಳಿಸಿದ್ದ ಫಸ್ಟ್ ಕ್ಲಾಸ್ ಕ್ರಿಕೆಟ್‍ನ ಅತ್ಯಧಿಕ ರನ್ ಮೊತ್ತವನ್ನು ಪ್ರತಿನಿಧಿಸುತ್ತದೆ. ಅಂಡರ್-16 ಕ್ರಿಕೆಟ್‍ನಲ್ಲಿ ಬರೋಡ ಪರ ಆಡಿದ್ದ ಹಾರ್ದಿಕ್ ಪಾಂಡ್ಯ ದ್ವಿಶತಕ (228 ರನ್) ಸಿಡಿಸಿದ್ದರು. ಇತ್ತ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಸಂದರ್ಭದಲ್ಲೂ ಹಾರ್ದಿಕ್ ಪಾಂಡ್ಯ ಇದೇ ನಂಬರ್ ಜೆರ್ಸಿಯನ್ನು ಧರಿಸಿ ಆಡುತ್ತಾರೆ. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲೂ ಹಿಂದಿನ ಇನ್ನಿಂಗ್‍ನ ಪ್ರದರ್ಶನದ ಸ್ಫೂರ್ತಿಗಾಗಿ ಆದೇ ಸಂಖ್ಯೆಯನ್ನು ಪಡೆದಿದ್ದಾರೆ ಎಂದು ಮತ್ತೊಬ್ಬ ಅಭಿಮಾನಿ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಬೆನ್ನು ನೋವಿನ ಕಾರಣದಿಂದ ಟೀಂ ಇಂಡಿಯಾದಿಂದ ದೂರವಾಗಿದ್ದ ಹಾರ್ದಿಕ್ ಪಾಂಡ್ಯ, ಶಸ್ತ್ರ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು. ಆ ಬಳಿಕ ಅವರನ್ನು ನ್ಯೂಜಿಲೆಂಡ್ ‘ಎ’ ತಂಡದ ವಿರುದ್ಧದ ಟೂರ್ನಿಗೆ ಆಯ್ಕೆ ಸಮಿತಿ ಪರಿಗಣಿಸಿತ್ತು. ಆದರೆ ಪಾಂಡ್ಯಗೆ ಮತ್ತಷ್ಟು ವಿಶ್ರಾಂತಿ ಅಗತ್ಯವಿದ್ದ ಕಾರಣದಿಂದ ಅಂತಿಮ ಕ್ಷಣದಲ್ಲಿ ಅವರನ್ನು ಟೂರ್ನಿಯಿಂದ ಕೈಬಿಟ್ಟಿತ್ತು. ಆ ಬಳಿಕ ದಕ್ಷಿಣ ಆಫ್ರಿಕಾ ಟೂರ್ನಿಗೆ ಆಯ್ಕೆ ಸಮಿತಿ ಪಾಂಡ್ಯರನ್ನು ಆಯ್ಕೆ ಮಾಡಿದ್ದರೂ ಕೊರೊನಾ ಕಾರಣದಿಂದ ಟೂರ್ನಿ ರದ್ದಾಗಿತ್ತು. ಇತ್ತ ಟೀಂ ಇಂಡಿಯಾ ತಂಡಕ್ಕೆ ಕಮ್‍ಬ್ಯಾಕ್ ಮಾಡಲು ಫಿಟ್ನೆಸ್ ಕಾಯ್ದುಕೊಳ್ಳುವಲ್ಲಿ ಶ್ರಮವಹಿಸಿದ್ದ ಹಾರ್ದಿಕ್, ಡಿವೈ ಪಾಟೀಲ್ ಟಿ20 ಕಪ್ ಟೂರ್ನಿಯಲ್ಲಿ ರಿಲಯನ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

Comments

Leave a Reply

Your email address will not be published. Required fields are marked *