ಹಸಿವಿನಿಂದ ಸಾವನ್ನಪ್ಪಿದ ಕಾರ್ಮಿಕ ಮಹಿಳೆಯನ್ನು ಎಬ್ಬಿಸಲು ಪುಟ್ಟ ಕಂದನ ಪರದಾಟ

-ಮನಕಲಕುವ ವೈರಲ್ ವಿಡಿಯೋ

ಪಾಟ್ನಾ: ಪ್ರವಾಸಿ ಕಾರ್ಮಿಕರು ಲಾಕ್‍ಡೌನ್ ಕಾರಣದಿಂದ ಕೆಲಸವಿಲ್ಲದೇ ಸ್ವ-ಸ್ಥಳಗಳಿಗೆ ಮರಳುವ ಸಂದರ್ಭದಲ್ಲಿ ವಿವಿಧ ಕಾರಣಗಳಿಂದ ಸಾವನ್ನಪ್ಪುವ ಪ್ರಕರಣಗಳು ಮುಂದುವರಿದಿದೆ. ಆಹಾರ, ವಸತಿ ಹಾಗೂ ಅನಾರೋಗ್ಯದ ಕಾರಣದಿಂದ ಕಾರ್ಮಿಕರು ಸಾವನ್ನಪ್ಪುತ್ತಿರುವ ಘಟನೆಗಳು ವರದಿಯಾಗಿವೆ. ಇಂತಹ ಸಾಲಿನಲ್ಲೇ ನಿಲ್ಲುವ ಮನಕಲಕುವ ದೃಶ್ಯ ಬಿಹಾರದ ಮುಜಾಫರ್ ನಗರದ ರೈಲ್ವೇ ನಿಲ್ದಾಣವೊಂದರಲ್ಲಿ ನಡೆದಿದೆ.

ಕೊರೊನಾ ಲಾಕ್‍ಡೌನ್‍ನಿಂದ ಸಿಲುಕಿದ ನರಳುತ್ತಿರುವ ಪ್ರವಾಸಿ ಕಾರ್ಮಿಕರ ದೈನಂದಿನ ವರದಿಗಳಲ್ಲಿ ಈ ದುರಂತ ಘಟನೆ ಒಂದಾಗಿದೆ. ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಕಂದಮ್ಮ, ಸಾವನ್ನಪ್ಪಿರುವ ತನ್ನ ಅಮ್ಮನನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಮಹಿಳೆ ಶಮ್ರಿಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಕುಸಿದು ಸಾವನ್ನಪ್ಪಿದ್ದು, ಆಕೆಯ ಮೃತದೇಹವನ್ನು ಮುಜಾಫರ್ ನಗರದ ರೈಲ್ವೇ ನಿಲ್ದಾಣವೊಂದರಲ್ಲಿ ಬಟ್ಟೆಯಿಂದ ಸುತ್ತಿ ಇಡಲಾಗಿತ್ತು.

23 ವರ್ಷದ ಬಿಹಾರ ಮೂಲದ ಕಾರ್ಮಿಕರ ಮಹಿಳೆ ಗುಜರಾತ್‍ನ ಅಲಹಾಬಾದ್‍ನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದಳು. ಲಾಕ್‍ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಒಂದು ಹೊತ್ತಿನ ಊಟಕ್ಕೂ ಸಮಸ್ಯೆ ಎದುರಿಸಿದ್ದ ಮಹಿಳೆ ಅನಾರೋಗ್ಯದ ಸಮಸ್ಯೆಗೆ ಗುರಿಯಾಗಿದ್ದಳು. ಇದೇ ಸಂದರ್ಭದಲ್ಲಿ ಸರ್ಕಾರ ಶ್ರಮಿಕ್ ಎಕ್ಸ್ ಪ್ರೆಸ್ ರೈಲು ಆರಂಭಿಸಿದ್ದ ಕಾರಣ ತನ್ನ ಸ್ವ-ಸ್ಥಳಕ್ಕೆ ತೆರಳಲು ನಿರ್ಧರಿಸಿದ್ದ ಮಹಿಳೆ ಮೇ 24 ರಂದು ರೈಲಿನಲ್ಲಿ ಸಹೋದರಿ ಹಾಗೂ ಇತರರೊಂದಿಗೆ ಮುಜಾಫರ್ ನಗರಕ್ಕೆ ಹೊರಟ್ಟಿದ್ದಳು. ಆದರೆ ರೈಲಿನ ಪ್ರಯಾಣದ ಸಂದರ್ಭದಲ್ಲೂ ಆಹಾರ ಸಿಗದೆ ಮತ್ತಷ್ಟು ಬಳಲಿದ್ದ ಮಹಿಳೆ ಮುಜಾಫರ್ ನಗರಕ್ಕೆ ಆಗಮಿಸುವ ಮುನ್ನವೇ ರೈಲಿನಲ್ಲೇ ಕುಸಿದು ಸಾವನ್ನಪ್ಪಿದ್ದಳು.

ಆಕೆಯ ಸಂಬಂಧಿಗಳು ರೈಲ್ವೇ ನಿಲ್ದಾಣದಲ್ಲಿ ದೇಹವನ್ನ ಬಟ್ಟೆಯಲ್ಲಿ ಸುತ್ತಿ ಇಟ್ಟಿದ್ದರು. ಆದರೆ ತನ್ನ ಅಮ್ಮ ಸಾವನ್ನಪ್ಪಿರುವ ಅರಿವಿಲ್ಲದ ಪುಟ್ಟ ಕಂದಮ್ಮ ಬಟ್ಟೆಯೊಂದಿಗೆ ಆಡುತ್ತಾ ಅಮ್ಮನನ್ನು ಎಬ್ಬಿಸುವ ಪ್ರಯತ್ನ ನಡೆಸಿತ್ತು. ಘಟನೆ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ರೈಲ್ವೆ ಇಲಾಖೆ, ಮೃತ ಮಹಿಳೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಈಗಾಗಲೇ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಸುಳ್ಳು ಮಾಹಿತಿಯನ್ನು ಹಬ್ಬಿಸಬೇಡಿ ಎಂದು ತಿಳಿಸಿದೆ. ಹಸಿವು, ರಣ ಬೀಸಿಲು ಹಾಗೂ ಡಿಹೈಡ್ರೇಷನ್ ಕಾರಣದಿಂದ ಮಹಿಳೆ ಸಾವನ್ನಪ್ಪಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *