ಹಸಿರು ನಿಶಾನೆ ಸಿಕ್ಕಿದ ಕೂಡಲೇ ಭಾರೀ ಪ್ರಮಾಣದಲ್ಲಿ ಕೊರೊನಾ ಲಸಿಕೆ ಉತ್ಪಾದನೆ: ಮೋದಿ

ನವದೆಹಲಿ: ನಮ್ಮ ದೇಶದಲ್ಲಿ ಒಂದಲ್ಲ ಎರಡಲ್ಲ ಮೂರು ಕೊರೊನಾ ಲಸಿಕೆಗಳು ತಯಾರಾಗುತ್ತಿವೆ. ಲಸಿಕೆ ಉತ್ಪಾದನೆಗೆ ಹಸಿರು ನಿಶಾನೆ ಸಿಕ್ಕಿದ ಬಳಿಕ ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದನೆ ಮಾಡಿ ಭಾರತೀಯರಿಗೆ ನೀಡಲು ಮಾರ್ಗಸೂಚಿ ಸಹ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

74ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ 7ನೇ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಭಾಷಣ ಮಾಡಿದ ಮೋದಿ, ಪ್ರತಿಯೊಬ್ಬರು ಕೊರೊನಾಗೆ ಲಸಿಕೆ ಯಾವಾಗ ಬರುತ್ತದೆ ಎಂದು ಕೇಳುತ್ತಿದ್ದಾರೆ. ಆದರೆ ಮೂರು ಲಸಿಕೆಗೆಗಳು ವಿವಿಧ ಹಂತದ ಪ್ರಯೋಗದಲ್ಲಿದೆ. ವಿಜ್ಞಾನಿಗಳಿಂದ ಈ ಲಸಿಕೆಗೆ ಹಸಿರು ನಿಶಾನೆ ಸಿಕ್ಕಿದ ಕೂಡಲೇ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗಲಿದೆ ಎಂದು ತಿಳಿಸಿದರು.

ಆರಂಭದಲ್ಲೇ ಕೊರೊನಾ ವಾರಿಯರ್ಸ್‌ಗಳಿಗೆ ಗೌರವ ಸಲ್ಲಿಸಿ ಭಾಷಣ ಆರಂಭಸಿದ ಮೋದಿ ಕೊರೊನಾ ಬಂದ ಸಮಯದಲ್ಲಿ 3 ಸಾವಿರ ಮಂದಿಗೆ ಪ್ರತಿ ದಿನ ಪರೀಕ್ಷೆ ನಡೆಯುತ್ತಿತ್ತು. ಆದರೆ ಈಗ ಪ್ರತಿ ದಿನ 7 ಲಕ್ಷ ಮಂದಿಗೆ ಪರೀಕ್ಷೆ ಮಾಡುತ್ತಿದ್ದೇವೆ. ಆರಂಭದಲ್ಲಿ ಎನ್‌ 95 ಮಾಸ್ಕ್‌, ಪಿಪಿಇ ಕಿಟ್‌, ವೆಂಟಿಲೇಟರ್‌ಗಳು ಉತ್ಪಾದನೆ ಆಗುತ್ತಿರಲಿಲ್ಲ. ಆದರೆ ಈಗ ಇವುಗಳನ್ನು ಉತ್ಪಾದಿಸಲು ಸಾಮರ್ಥ್ಯ ಪಡೆದಿದ್ದೇವೆ. ಆತ್ಮ ನಿರ್ಭರ ಭಾರತದ ಕನಸು ನನಸು ಮಾಡಬೇಕು ಎಂದು ಕರೆ ನೀಡಿದರು.

ಈ ಭಾಷಣದಲ್ಲೇ ರಾಷ್ಟ್ರೀಯ ಡಿಜಿಟಲ್‌ ಹೆಲ್ತ್‌ ಮಿಷನ್‌(ಎನ್‌ಡಿಎಚ್‌ಎಂ) ಬಗ್ಗೆ ಮಾತನಾಡಿದ ಮೋದಿ, ಪ್ರತೀ ಭಾರತೀಯರಿಗೆ ಡಿಜಿಟಲ್‌ ಆರೋಗ್ಯ ಕಾರ್ಡ್‌ ನೀಡಲು ಸರ್ಕಾರ ಮುಂದಾಗಿದೆ. ರೋಗಿಗಳ ಸಂಪೂರ್ಣ ಚಿಕಿತ್ಸೆಯ ವಿವರ ವೈದ್ಯರಿಗೆ ಇದರಿಂದ ಸಿಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ದೇಶದ ಪ್ರಜೆಗಳಿಗೆ ಸಿಗಲಿದೆ ಆರೋಗ್ಯ ಐಡಿ ಕಾರ್ಡ್‌. ಈ ಕಾರ್ಡ್‌ ಹೇಗಿರಲಿದೆ?

Comments

Leave a Reply

Your email address will not be published. Required fields are marked *