ಹಳ್ಳ ಹಿಡಿತಿದ್ಯಾ ಡ್ರಗ್ಸ್ ಡೀಲ್ ಪ್ರಕರಣ?

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ನಟಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಆದರೆ ಇದೀಗ ಪ್ರಕರಣ ಹಳ್ಳ ಹಿಡಿತಿದ್ಯಾ ಅನ್ನೋ ಅನುಮಾನವೊಂದು ಮೂಡಿದೆ.

ಹೌದು. ರಾಗಿಣಿ, ಸಂಜನಾ ಬಂಧಿಸಿದ್ದ ಪೊಲೀಸರ ಕೈ ಕಟ್ಟಿದ್ದು ಯಾರು?, ಕೇವಲ ಇಬ್ಬರು ನಟಿ ಮಣಿಯರಿಗಷ್ಟೆ ಸಿಸಿಬಿ ಬೇಟಿ ಸೀಮಿತವಾಯ್ತಾ ಅನ್ನೋ ಪ್ರಶ್ನೆ ಕೂಡ ಮೂಡಿದೆ. ಎಲ್ಲರನ್ನೂ ಹೆಡೆಮುರಿ ಕಟ್ಟುವುದಾಗಿ ಹೇಳಿದ್ದ ಸಿಸಿಬಿ ಇದೀಗ ಸುಮ್ಮನಾಗಿದೆ. ಈ ಮೂಲಕ ಸ್ಟಾರ್ ಗಳು ಹಾಗೂ ಸ್ಟಾರ್ ಗಳ ಮಕ್ಕಳು ಬಚಾವ್ ಆಗ್ಬಿಟ್ರಾ ಎಂಬ ಪ್ರಶ್ನೆ ಎದ್ದಿದೆ.

ಸೆಪ್ಟಂಬರ್ 4 ರಂದು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಆದರೆ ಇದೀಗ ತಿಂಗಳು ಕಳೆದ್ರೂ ಪ್ರಮುಖ ಆರೋಪಿಗಳು ಮಾತ್ರ ಇನ್ನೂ ಸಿಕ್ಕಿಲ್ಲ. ಎ1 ಆರೋಪಿಯಾಗಿರುವ ಶಿವಪ್ರಕಾಶ್ ಇನ್ನೂ ಅರೆಸ್ಟ್ ಆಗಿಲ್ಲ ಯಾಕೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಮನೆಯಿಂದ ಲೈಸೆನ್ಸ್ಡ್ ಗನ್ ತೆಗೆದುಕೊಂಡು ಹೋಗಿರುವ ಶಿವಪ್ರಕಾಶ್ ನನ್ನು ಬರೋಬ್ಬರಿ ತಿಂಗಳಾದರೂ ಪೊಲೀಸರಿಗೆ ಬಂಧಿಸೋಕೆ ಆಗಿಲ್ಲ. ಎ5 ಆರೋಪಿ ಆದಿತ್ಯ ಆಳ್ವ ಕೂಡ ಇನ್ನೂ ಸಿಕ್ಕಿಲ್ಲ. ಎಫ್‍ಐಆರ್ ದಾಖಲು ಆಗುವ ಮೊದಲೇ ಆದಿತ್ಯ ಆಳ್ವ ತಲೆಮರೆಸಿಕೊಂಡಿದ್ದನು.

ಆದಿತ್ಯ ಆಳ್ವ ಬಾಂಬೆಯಲ್ಲಿ ಬಾವ ವಿವೇಕ್ ಒಬೆರಾಯ್ ಆಶ್ರಯದಲ್ಲಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಇನ್ನಿಬ್ಬರು ಆರೋಪಿಗಳು ಕೂಡ ಪರಾರಿಯಾಗಿದ್ದಾರೆ. ಒಟ್ಟಿನಲ್ಲಿ ಕೇಸ್ ಹಳ್ಳ ಹಿಡಿದಿದೆ ಎಂದು ಜನ  ಹೇಳುತ್ತಿದ್ದು, ತಿಂಗಳು ಕಳೆದರೂ ಆರೋಪಿಗಳನ್ನ ಬಂಧಿಸದೆ ಪೊಲೀಸರು ಕಣ್ಮುಚ್ಚಿ ಕುಳಿತ್ರಾ ಅನ್ನೋ ಅನುಮಾನ ಮೂಡಿದೆ.

Comments

Leave a Reply

Your email address will not be published. Required fields are marked *