ಹಳ್ಳ ತುಂಬಿ ರಸ್ತೆ ಮಾರ್ಗ ಬಂದ್ – ಪರೀಕ್ಷೆಗೆ ತೆರಳಲು SSLC ವಿದ್ಯಾರ್ಥಿಗಳ ಪರದಾಟ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ತೆರಳಲು ಪರದಾಡಿದ ಘಟನೆ ನಡೆದಿದೆ.

ಮಳೆಯಿಂದ ಗ್ರಾಮದ ಹಳ್ಳತುಂಬಿ ಹರಿಯುತ್ತಿದ್ದು ರಸ್ತೆ ಮಾರ್ಗ ಬಂದ್ ಆಗಿರುವ ಹಿನ್ನೆಲೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಕೇವಲ ಮೂರು ಕಿ.ಮೀ ದೂರ ಇದ್ದರೂ, ತೆರಳಲು ಅಸಾಧ್ಯವಾಗಿದೆ. ಹಳ್ಳ ದಾಟಲು ವಿಫಲಯತ್ನ ನಡೆಸಿ ವಿದ್ಯಾರ್ಥಿಗಳು ವಾಪಸ್ ಬಂದಿದ್ದಾರೆ.

ಪಗಡದಿನ್ನಿ ಗ್ರಾಮದಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸದ್ಯ ರಸ್ತೆಯಿಲ್ಲ. ಹೀಗಾಗಿ ದೇವರಗುಡಿ ಗ್ರಾಮದ 10 ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಬೇರೆ ದಾರಿಯಿಲ್ಲದೆ ಸುಮಾರು 25 ಕಿ.ಮೀ ಸುತ್ತುವರೆದು ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದ್ದು, ವಿದ್ಯಾರ್ಥಿಗಳು ಸುತ್ತುವರಿದುಕೊಂಡು ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ. ಹಳ್ಳಕ್ಕೆ ಸೇತುವೆ ನಿರ್ಮಿಸದ ಹಿನ್ನೆಲೆ ವಿದ್ಯಾರ್ಥಿಗಳು ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಲಾಗಿದ್ದು, ಸೇತುವೆ ಕಾಮಗಾರಿ ಬಗ್ಗೆ ಮಾತ್ರ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಜಮೀನುಗಳಿಗೆ ತೆರಳಲು ರೈತರು ಸಹ ನಿತ್ಯ ಹರಸಾಹಾಸ ಪಡುವಂತಾಗಿದೆ. ಈಗಾಗಲೇ ಅಧಿಕಾರಿಗಳು ಹಾಗೂ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಅಂತ ಗ್ರಾಮಸ್ಥ ಪ್ರಭು ದೇವರಗುಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೀವು ನೋಡಿಕೊಂಡ ಹಾಗೆ, ನಿಮ್ಮ ಮಕ್ಕಳನ್ನು ನೋಡಿಕೊಳ್ಳುತ್ತೇವೆ: ಸಚಿವ ಸುರೇಶ್ ಕುಮಾರ್

Comments

Leave a Reply

Your email address will not be published. Required fields are marked *