ಹನುಮ ಜನ್ಮಭೂಮಿಯಿಂದ ರಾಮ ಜನ್ಮಭೂಮಿಗೆ ಸೈಕಲ್ ಯಾತ್ರೆ ಹೊರಟ ಹಾವೇರಿ ಯುವಕ

ಹಾವೇರಿ: ಯಾಲಕ್ಕಿ ಕಂಪಿನ ನಾಡಿನ ರಾಮಭಕ್ತ ಯುವಕ ಹನುಮ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಿಂದ ರಾಮಜನ್ಮಭೂಮಿ ಅಯೋಧ್ಯೆ ವರೆಗೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಈ ಸೈಕಲ್ ಯಾತ್ರೆಗೆ ಹುಕ್ಕೇರಿಮಠದ ಸದಾಶಿವ ಶ್ರೀಗಳು ಹಾಗೂ ಗಣ್ಯರು ಚಾಲನೆ ನೀಡಿದರು.

ನಗರದ ವಿವೇಕಾನಂದ.ಎಸ್.ಇಂಗಳಗಿ ತಮ್ಮ ಒತ್ತಡದ ಕೆಲಸಗಳ ನಡುವೆ ದೇಶದ ಒಳಿತಿಗಾಗಿ ಸಂಕಲ್ಪ ಮಾಡಿಕೊಂಡು ಯಾತ್ರೆಯನ್ನು ಕೈಗೊಂಡಿದ್ದಾರೆ. ಕೊರೊನಾ ಮುಕ್ತ ಭಾರತವಾಗಬೇಕು. ಜಿಲ್ಲೆಯ ಅಭಿವೃದ್ಧಿ, ಸಮಸ್ತ ಕರ್ನಾಟಕ ಜನರ ಒಳಿತಿಗಾಗಿ ಹಾಗೂ ಜೀವಜಲದ ಉಳಿವಿಗಾಗಿ ಸಂಕಲ್ಪ ಮಾಡಿಕೊಂಡು ಸೈಕಲ್ ಯಾತ್ರೆ ಆರಂಭಿಸಿದ್ದಾರೆ.

ವಿವೇಕಾನಂದ ಅವರು ಇಂದಿನಿಂದ ಸೈಕಲ್ ಯಾತ್ರೆ ಪ್ರಾರಂಭಸಿದ್ದು, ಪ್ರತಿನಿತ್ಯ 100 ಕಿ.ಮೀ. ಕ್ರಮಿಸಲಿದ್ದಾರೆ. ದಾರಿಯುದ್ದಕ್ಕೂ ಸಿಗುವ ರಾಮ ಭಕ್ತರ ಮನೆಯಲ್ಲಿ ವಸತಿ ಮಾಡಿ ನಂತರ ಮತ್ತೆ ಪ್ರಯಾಣ ಬೆಳೆಸುತ್ತ 2,000 ಕಿ.ಮೀ. ಕ್ರಮಿಸಿ ಅಯೋಧ್ಯಯ ಶ್ರೀ ರಾಮನ ದರ್ಶನ ಪಡೆಯಲಿದ್ದಾರೆ. ಅಲ್ಲಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ, ಬಳಿಕ ದೆಹಲಿಗೆ ಪ್ರಯಾಣ ಬೆಳೆಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಳಿಕ ಹಾವೇರಿ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ.

ಸೈಕಲ್‍ಗೆ ಸಾಧಕ ರತ್ನ ಲೋಗೋ ಅಳವಡಿಸುವ ಮೂಲಕ ಶ್ರೀ ಸದಾಶಿವ ಸ್ವಾಮೀಜಿ ಯಾತ್ರೆಗೆ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ್ ಕಲಕೋಟಿ, ಸಾಧಕ ರತ್ನ ಪೇಜಿನ ಗಣೇಶ್ ರಾಯ್ಕರ್, ಕಾರ್ತಿಕ್ ಲಂಬಿ, ಧರ್ಮರಾಜ ಖಜ್ಜೂರಕರ್, ಶ್ರವಣ್ ಪಂಡಿತ್, ಮಲ್ಲಿಕಾರ್ಜುನ್ ಇಂಗಳಗಿ, ಗಣೇಶ್ ಅಜ್ಜನವರ, ಮನೋಜ್ ವೈದ್ಯ, ಪ್ರಶಾಂತ್ ದೊಡ್ಡಮನಿ ಹಾಗೂ ಗಣ್ಯರು, ಯುವಕರು ಸೈಕಲ್ ಯಾತ್ರೆಗೆ ಶುಭಹಾರೈಸಿದರು.

Comments

Leave a Reply

Your email address will not be published. Required fields are marked *