ಹತ್ರಾಸ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೃತ್ಯ – ತುಂಡರಿಸಿದ ಅಪ್ರಾಪ್ತೆಯ ಶವ ಪತ್ತೆ

– ಜಮೀನಿನಲ್ಲಿ ಮೃತದೇಹದ ಭಾಗಗಳು ಪತ್ತೆ

ಲಕ್ನೋ: ಹತ್ರಾಸ್ ಗ್ರಾಮದ ಸಂತ್ರಸ್ತೆ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಮಧ್ಯೆಯೇ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ನಾಪತ್ತೆಯಾಗಿದ್ದ ಅಪ್ರಾಪ್ತೆಯ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಹತ್ರಾಸ್ ಗ್ಯಾಂಗ್‍ರೇಪ್ ಪ್ರಕರಣ ಸಿಬಿಐಗೆ ವರ್ಗಾವಣೆ

ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯ ಹಳ್ಳಿಯಲ್ಲಿ ಸೆಪ್ಟೆಂಬರ್ 26 ರಂದು 15 ವರ್ಷದ ಹುಡುಗಿ ನಾಪತ್ತೆಯಾಗಿದ್ದಳು. ಆದರೆ ಇದೀಗ ಆಕೆಯ ಶವ ಜಮೀನೊಂದರಲ್ಲಿ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ಕುಟುಂಬದ ಇಬ್ಬರು ಸಂಬಂಧಿಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡುವ ಮೊದಲು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅಪ್ರಾಪ್ತೆಯ ಪೋಷಕರು ಆರೋಪಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರ ತಂಡ ಹೋಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಅಪ್ರಾಪ್ತೆಯ ಮೃತದೇಹದ ಭಾಗಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಈ ಕುರಿತು ತನಿಖೆ ಪೊಲೀಸರು ನಡೆಸುತ್ತಿದ್ದಾರೆ.

ನಮ್ಮ ಕುಟುಂಬದಲ್ಲಿ ಭೂ ವಿವಾದವಿದೆ. ನಮ್ಮ ಮಗಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಅಪ್ರಾಪ್ತೆಯ ತಂದೆ ಹೇಳಿದ್ದಾರೆ. ಹೀಗಾಗಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಕೆ.ಕೆ.ಚೌಧಾರಿ ಹೇಳಿದ್ದಾರೆ.

ಹತ್ರಾಸ್ ಪ್ರದೇಶದ ದಲಿತ ಯುವತಿ ಮೇಲಿನ ಗ್ಯಾಂಗ್‍ರೇಪ್ ಪ್ರಕರಣವನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಿಬಿಐಗೆ ವರ್ಗಾಯಿಸಿದ್ದಾರೆ. ಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮೂಲಕ ಈ ಮಾಹಿತಿಯನ್ನು ಖಚಿತ ಪಡಿಸಿದೆ. ವಿಪಕ್ಷಗಳು ಸೇರಿದಂತೆ ದೇಶದ ಜನತೆ ಪ್ರಕರಣದ ತನಿಖೆಯನ್ನು ಸಿಬಿಐನಿಂದ ನಡೆಯಬೇಕೆಂದು ಆಗ್ರಹಿಸಿದ್ದವು. ಆದರೆ ಸಂತ್ರಸ್ತೆಯ ಕುಟುಂಬಸ್ಥರು ಸಿಬಿಐ ತನಿಖೆಗೆ ಆಗ್ರಹಿಸಿರಲಿಲ್ಲ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *