ಹತ್ತನೇ ಮದುವೆಯಾಗಲು ಮುಂದಾಗಿದ್ದ ಪತ್ನಿಯನ್ನ ಕೊಂದ 9ನೇ ಪತಿ

– ಮೊದಲು ಸ್ನೇಹ ನಂತ್ರ ಪ್ರೀತಿಸಿ ವಿವಾಹ
– 9 ಮದ್ವೆ ಆಗಿದ್ರೂ ಮತ್ತೊಬ್ಬನ ಜೊತೆ ಸಂಬಂಧ

ಹೈದರಾಬಾದ್: ಹತ್ತನೇ ಮದುವೆಯಾಗಲು ಮುಂದಾಗಿದ್ದ 30 ವರ್ಷದ ಮಹಿಳೆಯನ್ನು ಆಕೆಯ ಒಂಬತ್ತನೇ ಪತಿಯೇ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಪಹಾಡಿ ಶರೀಫ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ವರಲಕ್ಷ್ಮಿ (30) ಕೊಲೆಯಾದ ಮಹಿಳೆ. ಆರೋಪಿಯನ್ನು ನಾಗರಾಜು ಎಂದು ಗುರುತಿಸಲಾಗಿದೆ. ಇದೀಗ ಈತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮಾಡುತ್ತಿದ್ದಾರೆ.

ಏನಿದು ಪ್ರಕರಣ?
ಆರೋಪಿ ನಾಗರಾಜು ಕರ್ನೂಲ್ ಜಿಲ್ಲೆಯ ಜಲ್‍ಪಲ್ಲಿ ಮೂಲದವನಾಗಿದ್ದು, ಶ್ರೀರಾಮ ಕಾಲೋನಿಯಲ್ಲಿ ವಾಸಿಸುತ್ತಿದ್ದನು. ಈತ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಇತ್ತ ಮೃತ ವರಲಕ್ಷ್ಮಿ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಗೆ ಈಗಾಗಲೇ ಎಂಟು ಮದುವೆಯಾಗಿದ್ದು, 8ನೇ ಪತಿ ಮತ್ತು ಮಗನ ಜೊತೆ ವಾಸ ಮಾಡುತ್ತಿದ್ದಳು ಎಂದು ಎಸ್‍ಐ ಕುಮಾರಸ್ವಾಮಿ ತಿಳಿಸಿದ್ದಾರೆ.

ನಾಗರಾಜು ಮತ್ತು ವರಲಕ್ಷ್ಮಿ ಇಬ್ಬರಿಗೂ ಪರಿಚಯವಾಗಿ ಸ್ನೇಹವಾಗಿದೆ. ಸ್ನೇಹ ಪ್ರೀತಿಯಾಗಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಬಳಿಕ ವರಲಕ್ಷ್ಮಿ ನಾಗರಾಜುನನ್ನು ಮದುವೆಯಾಗಲು ಪತಿ ಮತ್ತು ಮಗನನ್ನು ಬಿಟ್ಟು ಬಂದಿದ್ದಳು. ಮದುವೆಯಾದ ಕೆಲವು ತಿಂಗಳುಗಳ ನಂತರ ಮತ್ತೆ ವರಲಕ್ಷ್ಮಿ ಇತರ ಪುರುಷರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ಬಗ್ಗೆ ತಿಳಿದ ಪತಿ ನಾಗರಾಜು ಆತನಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದನು. ಅಲ್ಲದೇ ಈ ವಿಚಾರದ ಬಗ್ಗೆ ದಂಪತಿಯ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು.

ಮಂಗಳವಾರ ಮತ್ತೆ ದಂಪತಿಯ ಮಧ್ಯೆ ಇದೇ ವಿಚಾರಕ್ಕೆ ಜಗಳ ನಡೆದಿದೆ. ಕೋಪದಲ್ಲಿ ನಾಗರಾಜು ಚಾಕುವಿನಿಂದ ಪತ್ನಿಯ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಪಹಾಡಿ ಶರೀಫ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ತನಿಖೆಯ ವೇಳೆ ನಾಗರಾಜು ವರಲಕ್ಷ್ಮಿಯ ಒಂಬತ್ತನೇ ಪತಿ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.

ಮಹಿಳೆ ಮೊದಲಿಗೆ ಪುರುಷನೊಂದಿಗೆ ಸ್ನೇಹ ಬೆಳೆಸುತ್ತಿದ್ದಳು. ನಂತರ ಅವರ ಜೊತೆ ಮದುವೆಯಾಗುತ್ತಿದ್ದಳು. ಬಳಿಕ ವಿವಾಹವಾದ ಸ್ವಲ್ಪ ತಿಂಗಳುಗಳ ನಂತರ ಮತ್ತೆ ಆತನನ್ನು ಬಿಟ್ಟು ಬೇರೆ ವ್ಯಕ್ತಿಯ ಜೊತೆ ಮದುವೆಯಾಗುತ್ತಿದ್ದಳು ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *