ಹಣ ಪಾವತಿಸದ ವೃದ್ಧನನ್ನು ಬೆಡ್ ಮೇಲೆ ಕಟ್ಟಿ ಹಾಕಿದ ಆಸ್ಪತ್ರೆ ಸಿಬ್ಬಂದಿ

– ಪ್ರಕರಣ ಮುಚ್ಚಿ ಹಾಕಲು ಕಥೆ ಕಟ್ಟಿದ ಆಡಳಿತ ಮಂಡಳಿ

ಭೋಪಾಲ್: ಚಿಕಿತ್ಸೆ ಪಡೆದುಕೊಂಡು ಹಣ ಪಾವತಿಸದ ವೃದ್ಧನನ್ನು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಬೆಡ್ ಮೇಲೆ ಕಟ್ಟಿ ಹಾಕಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಶಾಜಾಪುರ್‌ನಲ್ಲಿ ನಡೆದಿದೆ.

ವೃದ್ಧನಿಗೆ ಸ್ನಾಯು ಸೆಳೆತ ಉಂಟಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಆದರೆ ಈಗ ಮತ್ತೆ ಗಾಯಮಾಡಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಕಟ್ಟಿ ಹಾಕಿದ್ದೇವೆ ಎಂದು ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ.

ಈ ಘಟನೆಯು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಗಮನಕ್ಕೂ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಈ ಕುರಿತು ತನಿಖೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಆಸ್ಪತ್ರೆಗೆ ದಾಖಲಾಗುವಾಗ 5,000 ರೂ. ಪಾವತಿಸಿದ್ವಿ. ಆದರೆ ಚಿಕಿತ್ಸೆ ಫಲಕಾರಿಯಾಗಲು ಬಹಳ ದಿನ ಬೇಕಾಯಿತು. ಹೀಗಾಗಿ ನಾವು ಇನ್ನೂ 11 ಸಾವಿರ ರೂ. ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ನಮ್ಮಿಂದ ಹಣ ಸಿಗುವುದಿಲ್ಲ ಎಂದು ತಿಳಿಸಿ ಆಸ್ಪತ್ರೆಯ ಸಿಬ್ಬಂದಿ ವೃದ್ಧನನ್ನು ಬೆಡ್ ಮೇಲೆ ಮಲಗಿಸಿ ಕೈ-ಕಾಲು ಕಟ್ಟಿದ್ದರು ಎಂದು ವೃದ್ಧನ ಕುಟುಂಬಸ್ಥರು ದೂರಿದ್ದಾರೆ.

ಕಥೆ ಕಟ್ಟಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದ ಆಸ್ಪತ್ರೆಯ ಆಡಳಿತ ಮಂಡಳಿ, ಮಾನವೀಯತೆ ದೃಷ್ಟಿಯಿಂದ ಅವರು ಪಾವತಿಸಬೇಕಾದ ಹಣವನ್ನು ಮನ್ನಾ ಮಾಡಲಾಗಿದೆ ಎಂದು ಹೇಳಿದೆ. ಇದನ್ನು ಅರಿತ ಶಾಜಾಪುರ್ ಜಿಲ್ಲಾಡಳಿತವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆಸ್ಪತ್ರೆಯ ವಿರುದ್ಧ ತನಿಖೆಗೆ ಆದೇಶ ನೀಡಿದೆ.

Comments

Leave a Reply

Your email address will not be published. Required fields are marked *