ಹಣಕೊಟ್ಟು ಅಪ್ರಾಪ್ತೆಯನ್ನ ಖರೀದಿಸಿ ಮದ್ವೆಯಾದ – 7 ತಿಂಗಳು ಲೈಂಗಿಕ ಕಿರುಕುಳ

– ಪ್ರವಾಸದ ನೆಪದಲ್ಲಿ ಕರ್ಕೊಂಡು ಬಂದು ಮಾರಿದ ಸಂಬಂಧಿ
– 2.20 ಲಕ್ಷಕ್ಕೆ ಖರೀದಿಸಿದ 30ರ ವ್ಯಕ್ತಿ

ಜೈಪುರ: 30 ವರ್ಷದ ವ್ಯಕ್ತಿಯೊಬ್ಬ 13 ವರ್ಷದ ಅಪ್ರಾಪ್ತೆಯನ್ನು ಹಣಕೊಟ್ಟು ಖರೀದಿಸಿ ಬಲವಂತವಾಗಿ ಮದುವೆಯಾಗಿದ್ದಾನೆ. ನಂತರ ಅನೇಕ ತಿಂಗಳು ಕಾಲ ಲೈಂಗಿಕ ಕಿರುಕುಳ ನೀಡಿರುವ ಘಟನೆ ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಬಾಬ್ರಾನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತೆಯನ್ನು ಉತ್ತರ ಪ್ರದೇಶದಿಂದ ಖರೀದಿಸಿ ಏಳು ತಿಂಗಳ ಹಿಂದೆ ಬಲವಂತವಾಗಿ ಮದುವೆಯಾಗಿದ್ದನು. ಅನೇಕ ತಿಂಗಳುಗಳ ನಂತರ ಅಪ್ರಾಪ್ತೆ ಮಕ್ಕಳ ಸಹಾಯವಾಣಿಗೆ ಫೋನ್ ಮಾಡಿದ್ದಾಳೆ. ನಂತರ ಆಕೆಯನ್ನು ರಕ್ಷಣೆ ಮಾಡಲಾಗಿದೆ. ರಾಜಸ್ಥಾನ ರಾಜ್ಯ ಮಕ್ಕಳ ಸಂರಕ್ಷಣಾ ಆಯೋಗದ ಸದಸ್ಯ ಡಾ.ಶೈಲೇಂದ್ರ ಪಾಂಡ್ಯ ಅವರಿಗೆ ಅಪ್ರಾಪ್ತೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ.

ಏನಿದು ಪ್ರಕರಣ?
ಅಪ್ರಾಪ್ತೆ ಉತ್ತರ ಪ್ರದೇಶದ ಮೂಲದವಳಾಗಿದ್ದು, ಅಲ್ಲಿ ತನ್ನ ಪೋಷಕರು, ಸಹೋದರ ಮತ್ತು ಇಬ್ಬರು ಸಹೋದರಿಯರೊಂದಿಗೆ ವಾಸಿಸುತ್ತಿದ್ದಳು. ಅಪ್ರಾಪ್ತೆಯ ಕುಟುಂಬದ ಸಂಬಂಧಿ ಲಕ್ಷ್ಮಿ ಎಂಬಾಕೆ ಸತ್ಯನಾರಾಯಣ್ ಜೊತೆ ಮದುವೆಯಾಗಿದ್ದಳು. ಫೆಬ್ರವರಿ 14 ರಂದು ಲಕ್ಷ್ಮಿ ಪ್ರವಾಸದ ನೆಪದಲ್ಲಿ ಅಪ್ರಾಪ್ತೆಯನ್ನು ಚಿತ್ತೋರ್‌ಗಢಕ್ಕೆ ಕರೆದುಕೊಂಡು ಬಂದಿದ್ದಾಳೆ. ಅಲ್ಲಿ ಆಕೆಯನ್ನು ಬಾಬ್ರಾನಾ ಗ್ರಾಮದ ಬಸಂತಿ ಲಾಲ್ ದಾದೀಚ್‍ಗೆ 2.70 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆ.

ಹಣವನ್ನು ಪಾವತಿಸಿದ ನಂತರ ಬಸಂತಿ ಲಾಲ್ ದಾದೀಚ್ ಅಪ್ರಾಪ್ತೆಯನ್ನು ತನ್ನ ಹಳ್ಳಿಗೆ ಕರೆದುಕೊಂಡು ಹೋಗಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾಗಿದ್ದಾನೆ. ನಂತರ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪ್ರಾಪ್ತೆ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದನ್ನ ತಿಳಿದು ಆರೋಪಿ ಲಾಲ್ ಮತ್ತು ಆತನ ಸಹೋದರ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಪೋಷಕರು ಲಾಕ್‍ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಮನೆಗೆ ಕರೆದುಕೊಂಡು ಬರುವುದಾಗಿ ಸಮಾಧಾನ ಮಾಡಿದ್ದಾರೆ ಎಂದು ಡಾ.ಶೈಲೇಂದ್ರ ಪಾಂಡ್ಯ ತಿಳಿಸಿದರು.

ಕೊನೆಗೆ ಅಪ್ರಾಪ್ತೆ ಇವರ ಕಿರುಕುಳವನ್ನು ಸಹಿಸಲಾಗದೆ ಮಕ್ಕಳ ಸಹಾಯವಾಣಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾಳೆ. ಮಾಹಿತಿ ತಿಳಿದು ತಕ್ಷಣ ಅಪ್ರಾಪ್ತೆಯನ್ನು ರಕ್ಷಣೆ ಮಾಡಲಾಗಿದೆ. ಸದ್ಯಕ್ಕೆ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ, ಮಕ್ಕಳ ಕಳ್ಳಸಾಗಣೆ ಸೇರಿದಂತೆ ಅನೇಕ ಪ್ರಕರಣವನ್ನು ದಾಖಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಅವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪಾಂಡ್ಯ ಹೇಳಿದರು.

Comments

Leave a Reply

Your email address will not be published. Required fields are marked *