ಸ್ವಾತಂತ್ರ್ಯ ದಿನಾಚರಣೆಯಂದು ಸ್ಫೋಟಿಸಲು ಸಂಚು ರೂಪಿಸಿದ್ದ ಉಗ್ರ

– ದೆಹಲಿಯ ಜನನಿಬಿಡ ಪ್ರದೇಶದಲ್ಲಿ ಸ್ಫೋಟಕ್ಕೆ ಸಂಚು
– ಭದ್ರತೆ ಹೆಚ್ಚಿದ್ದರಿಂದ ಪ್ರಯತ್ನ ವಿಫಲ
– ವಿಚಾರಣೆ ವೇಳೆ ಭಯಾನಕ ಅಂಶ ಬಹಿರಂಗ

ನವದೆಹಲಿ: ಶುಕ್ರವಾರ ರಾತ್ರಿ ನಗರದಲ್ಲಿ ಬಂಧನವಾಗಿದ್ದ ಐಸಿಸ್ ಉಗ್ರನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯಾನಕ ಮಾಹಿತಿ ಹೊರ ಬಿದ್ದಿದ್ದು, ಇದರಿಂದಾಗಿ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಶುಕ್ರವಾರ ರಾತ್ರಿಯಷ್ಟೇ ದೆಹಲಿಯ ಧೌಲಾ ಕೌನ್ ಬಳಿ ಐಸಿಸ್ ಆಪರೇಟರ್ ನನ್ನು ಬಂಧಿಸಲಾಗಿದ್ದು, ಈತನನ್ನು ವಿಚಾರಣೆ ನಡೆಸಿದಾಗ ಭಯಾನಕ ಅಂಶ ಹೊರ ಬಿದ್ದಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಆರೋಪಿ ದೆಹಲಿಯ ಜನನಿಬಿಡ ಪ್ರದೇಶದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ. ಆದರೆ ಭದ್ರತೆ ಹೆಚ್ಚಿದ್ದ ಕಾರಣ ಪ್ರಯತ್ನ ವಿಫಲವಾಗಿತ್ತು ಎಂದು ಪೊಲೀಸರು ನಡೆಸಿದ ವಿಚಾರಣೆ ವೇಳೆ ಬಹಿರಂಗವಾಗಿದೆ.

ಆರೋಪಿಯನ್ನು ಇದೀಗ 8 ದಿನಗಳ ಕಾಲ ಪೊಲೀಸ್ ರಿಮ್ಯಾಂಡ್ ಹೋಮ್ ಗೆ ವಹಿಸಲಾಗಿದ್ದು, ಶುಕ್ರವಾರ ರಾತ್ರಿ ನಡೆದ ಸಣ್ಣ ಪ್ರಮಾಣದ ಗುಂಡಿನ ಚಕಮಕಿ ಬಳಿಕ ದೆಹಲಿಯ ಪೊಲೀಸ್ ಸ್ಪೆಷಲ್ ಸೆಲ್ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ನಂತರ ಲೋಧಿ ಕಾಲೋನಿಯಲ್ಲಿರುವ ಸ್ಪೆಷಲ್ ಸೆಲ್ ಪೊಲೀಸ್ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಈ ಕುರಿತು ಪೊಲೀಸ್ ಸ್ಪೆಷಲ್ ಸೆಲ್ ಡಿಸಿಪಿ ಪ್ರಮೋದ್ ಸಿಂಗ್ ಕುಶ್ವಾಹ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, 36 ವರ್ಷದ ಯುಸುಫ್ ಅಕಾ ಅಬುನನ್ನು ಬಂಧಿಸಿದ್ದು, ಈತ ಐಸಿಸ್ ಕಮಾಂಡರ್ ನೊಂದಿಗೆ ನೇರ ಸಂಪರ್ಕದಲ್ಲಿದ್ದ. ಅಲ್ಲದೆ ಅವನ ಪತ್ನಿ ಹಾಗೂ ನಾಲ್ಕು ಮಕ್ಕಳ ಪಾಸ್‍ಪೋರ್ಟ್ ಹೊಂದಿದ್ದಾನೆ ಎಂದು ಕುಶ್ವಾಹ್ ತಿಳಿಸಿದ್ದಾರೆ.

ಇತ್ತೀಚೆಗೆ ಸಿರಿಯಾದಲ್ಲಿ ಸಾವನ್ನಪ್ಪಿದ ಯುಸುಫ್ ಅಲ್ಹಿಂದಿ ಈತನನ್ನು ನಿರ್ವಹಣೆ ಮಾಡುತ್ತಿದ್ದ. ನಂತರ ಪಾಕಿಸ್ತಾನ ಮೂಲದ ಅಬು ಅಝಿಯಾಫಾ ಈತನನ್ನು ನಿಯಂತ್ರಿಸುತ್ತಿದ್ದ. ಆದರೆ ಅಫ್ಘಾನಿಸ್ಥಾನದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಈತ ಸಹ ಸಾವನ್ನಪ್ಪಿದ ಎಂದು ಪೊಲೀಸರು ವಿವರಿಸಿದ್ದಾರೆ.

30 ಬೋರ್ ಬಂದೂಕು ಸೇರಿ ಕುಕ್ಕರ್ ನಲ್ಲಿನ ಎರಡು ಐಇಡಿಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ನಾಲ್ಕು ಜೀವಂತ ಕಾರ್ಟ್‍ರಿಡ್ಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಖೋರಸನ್ ಪ್ರೊವಿನ್ಸ್‍ನ ಇಸ್ಲಾಮಿಕ್ ಸ್ಟೇಟ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದ. ಕೆಲವೇ ತಿಂಗಳ ಹಿಂದೆ ತನ್ನ ಊರಿನಲ್ಲಿ ಸ್ಫೋಟಕಗಳ ಪರೀಕ್ಷೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಸ್ಪೆಷಲ್ ಸೆಲ್ ಡಿಸಿಪಿ ತಿಳಿಸಿದ್ದಾರೆ.

ದೆಹಲಿಯ ಜನನಿಬಿಡ ಪ್ರದೇಶದಲ್ಲಿ ಸ್ಫೋಟ ನಡೆಸಲು ಯೋಜನೆ ರೂಪಿಸಿದ್ದ. ಕೊರೊನಾ ಹಿನ್ನೆಲೆ ಈತನ ಚಲನವಲನಕ್ಕೆ ನಿಯಂತ್ರಣ ಬಿತ್ತು. ನಂತರ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಸ್ಫೋಟ ನಡೆಸಲು ಸಂಚು ರೂಪಿಸಿದ್ದ, ಭದ್ರತೆ ಹೆಚ್ಚಿದ್ದರಿಂದ ಸಂಚು ವಿಫಲವಾಗಿದೆ. ವಶಪಡಿಸಿಕೊಳ್ಳಲಾದ ಎರಡು ಕುಕ್ಕರ್ ಐಇಡಿಗಳನ್ನು ಎನ್‍ಎಸ್‍ಜಿ ಸಹಾಯದಿಂದ ನಿಷ್ಕ್ರಿಯಗೊಳಿಸಲಾಗಿದೆ ಎಂದು ಕುಶ್ವಾಹ್ ವಿವರಿಸಿದ್ದಾರೆ.

ಐಸಿಸ್ ಆಪರೇಟರ್ ನನ್ನು ಎಂಟು ದಿನಗಳ ಕಾಲ ಪೊಲೀಸ್ ರಿಮ್ಯಾಂಡ್ ಹೋಮ್ ನಲ್ಲಿಡಲಾಗಿದ್ದು, ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಹಾಗೂ ಸ್ಫೋಟಕ ಕಾಯ್ದೆ ಸೇರಿ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *